ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ವಿದ್ಯುತ್ ಕಂಬದಲ್ಲಿ 440 ವೋಲ್ಟ್ ಸಾಮಥ್ರ್ಯದ ವಿದ್ಯುತ್ ತಂತಿ ಜೋತು ಬಿದ್ದಿದ್ದು, ಹೆದ್ದಾರಿಯಲ್ಲಿ ಗೋವಾದಿಂದ ಮಂಗಳೂರು ಕಡೆ ಸಂಚರಿಸುವ ಸರಕು ವಾಹನ ನಿಲ್ಲಿಸುವ ವೇಳೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ವಾಹನಕ್ಕೆ ಬೆಂಕಿ ತಗುಲಿದೆ. ತಕ್ಷಣಕ್ಕೆ ಅಲ್ಲಿನ ಸ್ಥಳಿಯ ಯುವಕರೆಲ್ಲ ಸೇರಿ ಬೆಂಕಿ ನಂದಿಸಿದ ಘಟನೆ ಭಟ್ಕಳದ ಶಿರಾಲಿಯ ಜನತಾ ವಿದ್ಯಾಲಯ ಶಾಲೆಯ ಪಕ್ಕದಲ್ಲಿ ನಡೆದಿದೆ.
ಗೋವಾದಿಂದ ಮಂಗಳೂರು ಮಾರ್ಗವಾಗಿ ಅಮೋನಿಯಾ ಸಿಲಿಂಡರ್ ತುಂಬಿದ್ದ ಸರಕು ವಾಹನದ ಚಾಲಕ ರಾಷ್ಟ್ರೀಯ ಹೆದ್ದಾರಿ-66 ಭಟ್ಕಳದ ಶಿರಾಲಿಯ ಜನತಾ ವಿದ್ಯಾಲಯ ಶಾಲೆಯ ಪಕ್ಕದಲ್ಲಿ ನೆರಳಿನಲ್ಲಿ ವಾಹನ ನಿಲ್ಲಿಸುವ ಸಂಧರ್ಭದಲ್ಲಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬದ ಎಲ್.ಟಿ. ಲೈನ್ ವೊಂದು ಜೋತು ಬಿದ್ದಿದ್ದು, ಈ ವಿದ್ಯುತ್ ತಂತಿ ನಿಲ್ಲಿಸುತ್ತಿದ್ದ ಸರಕು ವಾಹನದ ಹಿಂಬದಿಗೆ ತಗುಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಈ ಸಂಧರ್ಭದಲ್ಲಿ ಅಲ್ಲಿನ ಸ್ಥಳಿಯ ಕೆಲವು ಯುವಕರೆಲ್ಲ ಬೆಂಕಿಯನ್ನು ಕಂಡು ತಕ್ಷಣಕ್ಕೆ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ಯಶಶ್ವಿಯಾದರು. ಬಳಿಕ ವಾಹನದಲ್ಲಿ ಅಮೋನಿಯ ಸಿಲಿಂಡರ್‍ವಿದ್ದ ಕಾರಣ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಸಿಲಿಂಡರ್‍ನಲ್ಲಿ ಏನಾದರೂ ಬೆಂಕಿ ತಗುಲಿದೆಯೆ ಎಂದು ಪರಿಶೀಲಿಸಿದ್ದರು.
ಘಟನಾ ಸ್ಥಳವೂ ಒಂದು ಹಂತದಲ್ಲಿ ಭಯದ ವಾತಾವರಣವೇ ಸೃಷ್ಟಿಯಾಗಿದ್ದು, ದೊಡ್ಡ ಅವಘಡ ತಪ್ಪಿದಂತಾಗಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೋಲೀಸರು ಬಂದಿದ್ದು ಘಟನೆಯ ವಿವರ ಪಡೆದುಕೊಂಡಿದ್ದಾರೆ. ಒಟ್ಟಾರೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ ಶಿರಾಲಿಯ ಸ್ಥಳಿಯ ಯುವಕರು, ಸಾರ್ವಜನಿಕರ ಕಾರ್ಯ ಮೆಚ್ಚುವಂತಹದ್ದಾಗಿದೆ. ವಾಹನದ ಚಾಲಕ ಹಾಗೂ ನಿರ್ವಾಹಕ ಅವಗಢದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಹೆಸ್ಕಾಂ ಇಲಾಖೆ ಜೋತು ಬಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವ ಕಾರ್ಯ ಶೀಘ್ರದಲ್ಲಿ ಮಾಡಬೇಕಾಗಿದೆ.