ರಾಜ್ಯದಲ್ಲಿ ಒಟ್ಟೂ 412 ಸರ್ಕಾರಿ ಪದವಿ ಕಾಲೇಜುಗಳಿದ್ದು, ಕೆಳಸ್ತರದ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆಧಾರಸ್ತಂಭವಾಗಿದೆ. ಆದರೆ ಇನ್ನುವರೆಗೂ ಯಾವುದೇ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಶಮಾನೋತ್ಸವ ಆಚರಿಸಿದ ಉದಾಹರಣೆಗಳಿಲ್ಲ. ಅಂಕೋಲಾ ತಾಲ್ಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ರಾಜ್ಯದ ಮೊದಲ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಿಂದೆ 239 ಸರ್ಕಾರಿ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು. 2007ರಲ್ಲಿ ಸರ್ಕಾರ ರಾಜ್ಯದಲ್ಲಿ ಒಟ್ಟೂ 173 ಪದವಿ ಕಾಲೇಜುಗಳನ್ನು ಆರಂಭಿಸಿತ್ತು. ಅದರಲ್ಲಿ ಇನ್ನುವರೆಗೂ ಸ್ವಂತ ನಿವೇಶನವಾಗಲಿ, ಕಟ್ಟಡ ನಿರ್ಮಾಣವಾಗದ ಹಲವು ಕಾಲೇಜುಗಳಿವೆ. ಆದರೆ ಕಾಲೇಜು ಆರಂಭಗೊಂಡ 5 ವರ್ಷಗಳಲ್ಲಿಯೇ ಪೂಜಗೇರಿಯಲ್ಲಿ 10 ಎಕರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ಹೊಂದಿದೆ.

ಕಾಲೇಜು ಆರಂಭದಲ್ಲಿ ತಾತ್ಕಾಲಿಕವಾಗಿ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಕಾಲೇಜನ್ನು ಆರಂಭಿಸಲಾಯಿತು. ಬಿ.ಎ., ಬಿ.ಬಿ.ಎ., ಬಿ.ಕಾಂ. ತರಗತಿಗಳು ಆರಂಭಗೊಂಡು ಸ್ವಂತ ಕಟ್ಟಡಕ್ಕೆ ತೆರಳಿದ ನಂತರ ಬಿ.ಎಸ್ಸಿ., ಈಗ ಸ್ನಾತಕೋತ್ತರ ಪದವಿಗಳು ಪ್ರಾರಂಭವಾಗಿವೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಪ್ರಸ್ತುತ 638 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

RELATED ARTICLES  ಪೊಲೀಸರಿಂದ ದಾಳಿ : ಮನೆಯಲ್ಲಿ ತಲ್ವಾರ್ ಪತ್ತೆ.

ಕಾಲೇಜು ಆರಂಭದಲ್ಲಿ ಡಾ. ವಿ.ಜಿ. ಗಣೇಶ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರೆ ನಂತರ ಡಾ. ವಿದ್ಯಾ ನಾಯಕ, ಡಾ. ಗೀತಾ ಬಿ. ನಾಯಕ, ಪ್ರೊ. ವಿದ್ಯಾ ಡಿ. ನಾಯಕ ಕಾರ್ಯನಿರ್ವಹಿಸಿದ್ದು, ಹಾಲಿ ಡಾ. ಎಸ್.ವಿ. ನಾಯಕ ಕರ್ತವ್ಯದಲ್ಲಿದ್ದಾರೆ. ಕಾಲೇಜು ಆರಂಭಗೊಂಡು 10 ವರ್ಷವಾಗಿದ್ದರಿಂದಾಗಿ ಹಳೆಯ ವಿದ್ಯಾರ್ಥಿ ಸಂಘದವರು ದಶಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಂಡಿದ್ದರು.

ದಶಮಾನೋತ್ಸವದ ಅಂಗವಾಗಿ ಸೆ. 5ರಂದು ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿ ಮತ್ತು ಹಾಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ನಡೆಸಿದ್ದರು. ನಂತರ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಪ್ರಜ್ಞೆ ಮೂಡಿಸಲು ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ. ಗುಂದಿ ಅವರಿಂದ ಸಾಹಿತ್ಯ ಕಾರ್ಯಾಗಾರ ಹಮ್ಮಿಕೊಂಡಿದ್ದರು. ‘ದಶಮಾನದ ಸಂಭ್ರಮ’ ಸ್ಮರಣ ಸಂಚಿಕೆ ಹೊರತರಲು ವಿದ್ಯಾರ್ಥಿಗಳಿಗೆ ಕಥೆ-ಕವನ ಸ್ಪರ್ಧೆಯನ್ನು ಏರ್ಪಡಿಸಿ, ಅಕ್ಟೋಬರ್ 21ರಂದು ನಡೆದ ದಶಮಾನೋತ್ಸವದಲ್ಲಿ ಬಹುಮಾನ ವಿತರಿಸಿದ್ದಾರೆ. ಅಂದು ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

RELATED ARTICLES  ಕ್ರೀಡಾ ತಂಡಗಳಿಗೆ ಸಮವಸ್ತ್ರಗಳನ್ನು ವಿತರಿಸಿದ ನಾಗರಾಜ ನಾಯಕತೊರ್ಕೆ

ದಶಮಾನೋತ್ಸವದ ನೆನಪಿಗಾಗಿ ಬಿ.ಬಿ.ಎ. ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಶಾರದಾ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘದಿಂದ ಸುಸಜ್ಜಿತ ಧ್ವಜದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಪೋಪಹಾರ, ಊಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು. ಸೇವೆ ಸಲ್ಲಿಸಿದ ಎಲ್ಲಾ ಪ್ರಾಚಾರ್ಯರನ್ನು ಹಾಗೂ ಸಿಬ್ಬಂದಿ ಸಂತೋಷ ಪಿ.ಕೆ., ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕ್ರೀಡೆಯಲ್ಲಿ ವಿಜೇತರಾದ 6 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಧನ ವಿತರಿಸಿದರು. ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಪೂರಕವಾಗುವ ಉಪನ್ಯಾಸಗಳನ್ನು ನಡೆಸಿದರು. ಈ ಮೂಲಕವಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ದಶಮಾನೋತ್ಸವ ಆಚರಿಸಿದ ಕಾಲೇಜೆಂಬ ಹೆಗ್ಗಳಿಕೆಗೆ ಅಂಕೋಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾತ್ರವಾಗಿದೆ.