ಮತ್ಸ್ಯತೀರ್ಥ ಕೇಳಿದ್ದೀರಾ ? ಇದೇನಪ್ಪ.. ಹೊಸ ಹೆಸರು ಅನ್ನಿಸಬಹುದು. ಈ ಊರಿನಲ್ಲಿ ಮತ್ಸ್ಯವನ್ನೇ (ಮೀನು) ಪೂಜ್ಯನೀಯ ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಇಲ್ಲಿನವರಿಗೆ ಮೀನೇ ಆರಾಧ್ಯ ದೈವ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಇಲ್ಲಿನ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಮತ್ಸ್ಯತೀರ್ಥವಿದ್ದು ಇಲ್ಲಿರುವ ಅಪೂರ್ವವಾದ ಮತ್ಸ್ಯ ಸಂಕುಲದ ಕಾರಣದಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಬೆಂಗಳೂರಿನಿಂದ ಸಕಲೇಶಪುರ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾಗುವಾಗ ಕೊಕ್ಕಡ ಎಂಬಲ್ಲಿಂದ ನೇರವಾಗಿ 20ಕಿ.ಮೀ ದೂರದ ಶಿಶಿಲ ಎಂಬಲ್ಲಿದೆ.
ಸಾಗರದಂತೆ ವಿಶಾಲವಾಗಿ ತುಂಬಿ ಹರಿಯುವ ಕಪಿಲಾ ನದಿಯೇ ಈ ಮೀನುಗಳ ಆಶ್ರಯ ತಾಣ. ಈ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ಮೇಲೆ ನಿಂತು ಮೀನುಗಳನ್ನು ನೋಡುವುದೇಒಂದು ವಿಶಿಷ್ಟ ಅನುಭವ. ಇಲ್ಲಿರುವ ಮೀನುಗಳಿಗೆ ಹರಕೆಯನ್ನು ಹೇಳಿಕೊಂಡರೆ ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ.
ಇಲ್ಲಿ ಅಪರೂಪದಮಹರ್ಷಿರ್ ಅಥವಾ ಪೆರುವೋಳ್ ಪ್ರಬೇಧದ ಬೃಹತ್ ಗಾತ್ರದ ಮೀನುಗಳು ಇವೆ. ತಿನ್ನಲು ಯೋಗ್ಯವಲ್ಲ.ಇವು ದೇವರ ಮೀನುಗಳೆಂಬ ಭಾವನೆಯಿಂದ ಸರ್ವಧರ್ಮೀಯರೂ ಪೂಜಿಸುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಸಮೀಪದಲ್ಲೇ ಮತ್ಸ್ಯಗಳ ಉಗಮ ಸ್ಥಾನ ಮೀನುಗುಂಡಿ ಎಂಬ ಪ್ರದೇಶವೂಇದೆ. ಇಲ್ಲಿನ ದೇವಾಲಯದಲ್ಲಿ ಬಾವಿಯೇ ಇಲ್ಲ, ಬದಲಿಗೆ ಇಲ್ಲಿ ನದಿಯ ನೀರನ್ನೇ (ಮತ್ಸ್ಯತೀರ್ಥದ) ದೇವರ ಅಭಿಷೇಕಕ್ಕೆ ಬಳಸಲಾಗುತ್ತಿರುವುದು ಇಲ್ಲಿನ ವಿಶೇಷತೆ ಹಾಗೂ ಈ ಮತ್ಸ್ಯತೀರ್ಥವು ದೇಶದ ಪ್ರಮುಖ ಮತ್ಸ್ಯಧಾಮವಾಗಿಯೂ ಗುರುತಿಸಿಕೊಂಡಿದೆ.
ಇಲ್ಲಿನ ಮೀನಿಗೆ ಅರಳು, ಮಂಡಕ್ಕಿ ಹಾಗೂ ಅಕ್ಕಿಯನ್ನು ಭಕ್ತಾದಿಗಳು ಆಹಾರವಾಗಿ ನೀಡಬಹುದಾಗಿದ್ದು, ದೊಡ್ಡ ದೊಡ್ಡ ಗಾತ್ರದ ಮೀನುಗಳು ಆಹಾರ ತಿನ್ನಲು ಸುಮಾರು 2-3 ಅಡಿ ಎತ್ತರದವರೆಗೂ ಹಾರುವುದನ್ನು ಹಾಗೂ ಆಹಾರವನ್ನು ತಿನ್ನಲು ಮೀನುಗಳು ಒಂದಕ್ಕೊಂದು ಪೈಪೋಟಿ ನೋಡುತ್ತಿದ್ದರೇ ಇಲ್ಲಿನ ಮತ್ಸ್ಯಲೋಕವೇ ಕಣ್ಮನತಣಿಸುತ್ತದೆ. ಇಲ್ಲಿರುವ ದೊಡ್ಡ ಗಾತ್ರದ ಮೀನುಗಳ ಪೈಕಿ ಬೃಹತ್‍ಗಾತ್ರದ ಮೀನೊಂದು ಇದೆ ಇದು ದೇವರ ಸೇವಕನೆಂದು ಹೇಳಲಾಗುತ್ತದೆ. ಇದರ ಕಿವಿಗೆ ಬಂಗಾರದ ಮೂಗುತಿಯನ್ನು ಚುಚ್ಚಲಾಗಿದ್ದು, ಇಲ್ಲಿರುವ ಶಿಶಿಲೇಶ್ವರ ದೇವರ ಪೂಜ ಸಂದರ್ಭದಲ್ಲಿ ನೀರಿನ ಮೇಲ್ಭಾಗಕ್ಕೆ ಬಂದು ದೇವರ ನೈವೇದ್ಯವನ್ನು ಸ್ವೀಕರಿಸಿ ಮತ್ತೆ ನೀರಿನಾಳಕ್ಕೆ ತೆರಳುತ್ತಿವೆ.
ಮತ್ಸ್ಯಗಳ ಮಾರಣ ಹೋಮ:
1996ರಲ್ಲಿ ಈ ಪ್ರಸಿದ್ಧ ಮೀನು ಗುಂಡಿಗೆ ಕಿಡಿಗೇಡಿಗಳು ವಿಷದ ಡಬ್ಬಗಳನ್ನು ತೂತು ಮಾಡಿ ನೀರಿನಡಿಯಲ್ಲಿಟ್ಟಿದ್ದ ಪರಿಣಾಮವಾಗಿ ಇಲ್ಲಿನ ದೈವರೂಪೀ ಲಕ್ಷಗಟ್ಟಲೆ ಮೀನುಗಳು ಸಾಮೂಹಿಕವಾಗಿ ಮೃತಪಟ್ಟಿದ್ದು ಇತಿಹಾಸ. ಇದೇ ದುರ್ಘಟನೆಯಲ್ಲಿ ದೇವರ ಮೀನೂ ಸಹಾ ಮೃತಪಟ್ಟಿದ್ದನ್ನು ಇಲ್ಲಿನ ಗ್ರಾಮಸ್ಥರು ಭಾವುಕರಾಗಿ ವಿವರಿಸುತ್ತಾರೆ. ಇಲ್ಲಿ ಸತ್ತ ಮೀನುಗಳ ರಾಶಿಯನ್ನು ಕಂಡ ಜನತೆ ಮಮ್ಮುಲ ಮರುಗಿದ್ದರು. ಸುಮಾರು 4-5 ಟ್ರಕ್‍ಗಳಷ್ಟು ಮೀನುಗಳು ಸತ್ತುಹೋದವು.
ಇಲ್ಲಿ ಸತ್ತು ಬಿದ್ದಿದ್ದ ಮೀನಿನ ರಾಶಿಯೇ ಸುಮಾರು4-5ಟ್ರಕ್‍ಗಳಷ್ಟಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಹಲವಾರು ತಲೆಮಾರುಗಳಿಂದ ದೇವಾಲಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮತ್ಸ್ಯ ಕುಲವೇ ಸಂಪೂರ್ಣ ವಿನಾಶದ ಹಾದಿಯನ್ನು ಹಿಡಿಯುವ ಅಪಾಯವೂಇಲ್ಲಿನ ಸ್ಥಳೀಯರಿಗೆ ಮತ್ತು ದೇವಾಲಯದ ಆಡಳಿತ ಮಂಡಳಿಗೆ ಕಾಡಿದ್ದು ಸುಳ್ಳಲ್ಲ. ಆ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ದಿನವೂ 50 ಮಂದಿಯಂತೆ ಸ್ವಯಂ ಸೇವಕರಾಗಿ ಈ ಮೀನುಗಳನ್ನು ನದಿಯಿಂದ ಮೇಲೆತ್ತಿ ಅವುಗಳನ್ನು ಅಲ್ಲೇ ದಡದಲ್ಲಿ ಶವ ಸಂಸ್ಕಾರ ಮಾಡಿ ಮೀನಿನ ಸ್ಮಾರಕವನ್ನು ನಿರ್ಮಿಸಿದ್ದರು. ಆ ಸ್ಮಾರಕ ಇಂದು ಮಣ್ಣಿನಲ್ಲಿ ಹೂತು ಹೋಗಿದೆ.
ಮತ್ಸ್ಯ ಸಂರಕ್ಷಣಾ ವೇದಿಕೆ:
ಸುಮಾರು 500 ರಿಂದ 700 ವರ್ಷಗಳ ಇತಿಹಾಸವಿರುವ ಈ ಶಿಶಿಲೇಶ್ವರ ಇಲ್ಲಿನ ಮತ್ಸ್ಯ ಸಂಕುಲವನ್ನು ಸುಮಾರು 100 ವರ್ಷಕ್ಕೂ ಹಿಂದಿನಿಂದ ರಕ್ಷಿಸಿಕೊಂಡು ಬಂದಿದ್ದಾನೆ ಎಂಬ ನಂಬಿಕೆಯಿದೆ. ಈ ಘೋರ ದುರಂತದ ನಂತರ ಇಲ್ಲಿನ ಸ್ಥಳೀಯರೇ ಆದ ಶ್ರೀ ಜಯರಾಮ ನೆಲ್ಲಿತ್ತಾಯ ಇವರ ನೇತೃತ್ವದಲ್ಲಿ ಸುಮಾರು 40-50 ಮಂದಿ ಸ್ಥಳೀಯ ಸ್ವಯಂ ಸೇವಕರ ತಂಡ ಮತ್ಸ್ಯ ಸಂರಕ್ಷಣಾ ವೇದಿಕೆಯನ್ನು ರಚಿಸಿಕೊಂಡು ಮೀನುಗಳ ಸಂರಕ್ಷಣೆÉಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.
ಎತ್ತಿನ ಹೊಳೆ ಯೋಜನೆ ಮತ್ಸ್ಯತಿರ್ಥಕ್ಕೆ ಮಾರಕ?
ಈಗಾಗಲೇ ರಾಜ್ಯ ಸರಕಾರವು ಸುಮಾರು 1,500 ಕೋಟಿ ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಘೋಷಿಸಿದ್ದು, ಇದು ಈ ಮತ್ಸ್ಯಧಾಮವಿರುವ ಪ್ರದೇಶದಿಂದ ಕೇವಲ 15 ಕೀ.ಮೀ ದೂರದಲ್ಲಿದೆ. ಈ ಯೋಜನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ ಇಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಿ ನದಿಯೇ ಬತ್ತಿ ಹೋಗಿ ಅಪೂರ್ವವಾದ ಮತ್ಸ್ಯ ಸಂಕುಲ ನಾಶವಾಗುವ ಭೀತಿ ಇದೆ. ಪ್ರಕೃತಿಯ ಮಡಿಲಲ್ಲಿ ಶಿಶಿಲ ದೇವಾಲಯ ವಿರುವುದರಿಂದ ಇಲ್ಲಿನ ದೇವಾಲಯಕ್ಕೆ ಸಾಗಲು ನದಿಗೆ ಅಡ್ಡಲಾಗಿ ಸುಳ್ಯದ ತೂಗುಸೇತುವೆ ಬ್ರಹ್ಮನೆಂದೇ ಹೆಸರು ಪಡೆದ ಗಿರೀಶ್ ಭಾರಧ್ವಜ್‍ರ ನೇತೃತ್ವದಲ್ಲಿ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಇದರಲ್ಲಿ ನಿಂತುಕೊಂಡು ಉದಯ ಪರ್ವತ, ಎತ್ತಿನ ಭುಜ ಮತ್ತು ಅಮೆದಿಕಲ್ ಪರ್ವತಗಳ ದೂರದ ನೋಟ ಮತ್ತು ದೇವಾಲಯದ ಸೊಬಗು ಮನೋಹರವಾಗಿರುತ್ತದೆ.