ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿ ಬಳಿಕ ರೂ.10 ಲಕ್ಷ ವೈದ್ಯಕೀಯ ಪರಿಹಾರವನ್ನು ಪರಿಸರವಾದಿ ಹಾಗೂ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಪಡೆದುಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಹಲವು ಆಶ್ವಾಸನೆಗಳನ್ನು ನೀಡಿದ್ದ ಸರ್ಕಾರ, ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಮನಸ್ಸಿಗೆ ತೀವ್ರ ನೋವುಂಟಾಗಿದ್ದು, ಸರ್ಕಾರ ನೀಡಲು ಮುಂದಾಗಿರುವ ಧನಸಹಾಯವನ್ನು ನಿರಾಕರಿಸುತ್ತಿರುವುದಾಗಿ ಈ ಹಿಂದೆ ಸಾಲುಮರದ ತಿಮ್ಮಕ್ಕ ಅವರು ಹೇಳಿದ್ದರು.
ಕೆಲ ದಿನಗಳ ಹಿಂದಷ್ಟೇ ಉಸಿರಾಟ ಸಮಸ್ಯೆಯಿಂದಾಗಿ ಸಾಲುಮರದ ತಿಮ್ಮಕ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ವೆಚ್ಚ ರೂ.10 ಲಕ್ಷವನ್ನು ನೀಡಲು ಮುಂದಾಗಿದ್ದರು. ಈ ಹಣವನ್ನು ತಿಮ್ಮಕ್ಕ ಅವರು ನಿರಾಕರಿಸಿದ್ದರು.
ಬಳಿಕ ಸ್ವತಃ ಸಿದ್ದರಾಮಯ್ಯ ಅವರೇ ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನೆಗೆ ಬರುವಂದೆ ಆಹ್ವಾನ ನೀಡಿದ್ದರು. ಈ ವೇಳೆ ಸಾಲುಮರದ ತಿಮ್ಮಕ್ಕ ಅವರ ಮನವೊಲಿಸಿ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿ ಚೆಕ್ ಮೂಲಕ ರೂ.10 ಲಕ್ಷವನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಮನಸ್ಸಿಗೆ ನೋವುಂಟು ಮಾಡಬೇಕೆಂಬುದು ನಮ್ಮ ಉದ್ದೇಶವಲ್ಲ. ನನಗೆ ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿದಿರಲಿಲ್ಲ. ಶೀಘ್ರದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಸರ್ಕಾರ ನೀಡುತ್ತಿರುವ ಹಣವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ಸಾಲು ಮರದ ತಿಮ್ಮಕ್ಕ ಅವರು ಹೇಳಿಕೊಂಡಿದ್ದಾರೆ.
ನಾನು ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದೇನೆ. ಅದನ್ನು ಯಾರು ತೀರಿಸುತ್ತಾರೆ. ರೂ.10 ಲಕ್ಷ ಹಣದಿಂದ ನಾನು ಸಾಲವನ್ನು ತೀರಿಸಬಹುದು. ಆದರೆ, ವೈದ್ಯಕೀಯ ಅಗತ್ಯಗಳನ್ನಲ್ಲ. ಸಚಿವರ ಮಾತುಗಳಿಂದ ಈಗಲೂ ನನ್ನ ಮನಸ್ಸಿನಲ್ಲಿ ನೋವಿದೆ. ಉಮಾ ಶ್ರೀಯವರು ಈ ರೀತಿ ಮಾತನಾಡುತ್ತಾರೆಂದುಕೊಂಡಿರಲಿಲ್ಲ. ನನ್ನ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ ಈ ರೀತಿ ಅವರು ಮಾತನಾಡಬಾರದಿತ್ತು. ಉನ್ನತ ಸ್ಥಾನದಲ್ಲಿರುವವರು ಮತ್ತೊಬ್ಬರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.