ಹೊನ್ನಾವರ : ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಯೋಜನೆ ಆಶಾದೀಪವಾಗಿದೆ. ಸಾಮಾಜಿಕ ಉತ್ತರದಾಯಿತ್ವ ಉದ್ಯೋಗ ಖಾತ್ರಿ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವ ಸಾಮಾಜಿಕ ಪರಿಶೋಧನೆ ಯೋಜನೆಯಲ್ಲಿನ ಫಲಾನುಭವಿಗಳಿಗೆ ಕೂಲಿಕಾರರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಕೂಲಿ ವಿಳಂಭವಾದ ಬಗ್ಗೆ ಇಲ್ಲಿ ಅಹವಾಲಿಗೆ ಅವಕಾಶವಿದೆ. ಯೋಜನೆ ಆರ್ಥಿಕ ಬದಲಾವಣೆ ಜೊತೆಗೆ ಜನರ ಮಾನಸಿಕ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಿದೆ. ಎಂದು ತಾಲೂಕು ಸೋಶೀಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಶನಿವಾರ ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತನಲ್ಲಿ ನಡೆದ 2017-18ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ. ಸ್ವ ಸಹಾಯ ಸಂಘದ ಸ್ತ್ರೀ ಶಕ್ತಿ ಸಂಘದ ಅದೆಷ್ಟೋ ಮಹಿಳೆಯರು ಇಂದು ಉದ್ಯೋಗ ಖಾತರಿಯ ಫಲಾನುಭವಿಗಳಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಉದ್ಯೋಗ ಖಾತ್ರಿ ಯೋಜನೆ ಒಂದು ವರದಾನದಂತಾಗಿದೆ.
ಸಾಮಾಜಿಕ ಪರಿಶೋಧನೆ ಗ್ರಾಮ ಪಂಚಾಯತ ಸಿಬ್ಬಂಧಿಗಳ ಕರ್ತವ್ಯ ಮತ್ತು ಕಡತ ನಿರ್ವಹಣೆಯಲ್ಲಿ ಸಾಕಷ್ಟು ಮಾಹಿತಿ ನೀಡುತ್ತಿದೆ. ಇದರಿಂದ ನಿರ್ವಹಣೆಯಲ್ಲಿ ನ್ಯೂನ್ಯತೆಯ ಪ್ರಮಾಣ ಇಳಿಮುಖವಾಗುತ್ತಿದೆ.
ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು ಪ್ರಯೋಜನ ಪಡೆಯುವಂತೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಭಾರತಿ ಆಚಾರಿ ಹೇಳಿದರು. ಸಾಮಾಜಿಕ ಪರಿಶೋಧನಾ ವರದಿಯನ್ನು ಗ್ರಾಮಸಂಪನ್ಮೂಲ ವ್ಯಕ್ತಿ ಅಜಿತ್ ನಾಯ್ಕ ಸಭೆಯಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಟ್ಟರು.
ಈ ಅವದಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಮತ್ತು ಎಪ್ರಿಲ್ 2017-ಸೆಪ್ಟಂಬರ್ 2017ರವರೆಗೆ ಪಂಚಾಯತ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು ಅಭಿವೃದ್ಧಿ ಅಧಿಕಾರಿ ಗೌರೀಶ್ ಹೆಗಡೆ ಓದಿ ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ದೇವಿ ಮಾಬ್ಲು ಗೌಡ, ಉಪಾಧ್ಯಕ್ಷ ಆನಂದ ಪರ್ನಾಂಡಿಸ್, ಸದಸ್ಯರಾದ ಶಿವಾನಂದ ಗೌಡ ಇನ್ನಿತರ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಮನೋಜ್ ಕುಮಾರ್ ,ಬಿಎಪ್‍ಟಿ ಶ್ರೀಧರ ಪಟಗಾರ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಅಜಿತ್ ನಾಯ್ಕ, ಅಕ್ಷತಾ ನಾಯ್ಕ, ಪ್ರಶಾಂತ್ ಮುಕ್ರಿ ಮತ್ತು ನೂರಾರು ಸ್ವ ಸಹಾಯ ಸಂಘದ ಮಹಿಳೆಯರು ಫಲಾನುಭವಿಗಳು ಹಾಜರಿದ್ದರು.