ನವದೆಹಲಿ: ಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕೆಂದು ಹಣಕಾಸು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜ್ಯಗಳ ಹಣಕಾಸು ಸಚಿವರಿರುವ ಸಮಿತಿ ಅ.29 ರಂದು ಈ ಸಲಹೆ ನೀಡಿದ್ದು, ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿಯನ್ನು ಕಡಿಮೆ ಮಾಡಬೇಕು ಹಾಗೂ ಕಡಿಮೆ ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ಉತ್ಪಾದಕರಿಗೆ ಶೇ.1 ರಷ್ಟು ತೆರಿಗೆಯನ್ನು ವಿಧಿಸಬೇಕು ಎಂದು ಸಲಹೆ ನೀಡಿದೆ.
ಈಗ ವಾರ್ಷಿಕವಾಗಿ 1 ಕೋಟಿ ರೂಪಾಯಿ ವಹಿವಾಟು ನಡೆಸುವ ರೆಸ್ಟೋರೆಂಟ್ ಹಾಗೂ ಉತ್ಪಾದಕರು ಅನುಕ್ರಮವಾಗಿ ಶೇ.2 ಹಾಗೂ 5 ರಷ್ಟು ತೆರಿಗೆಯನ್ನು ಪಾವತಿಸಬೇಕು, ಹಾಗೂ ವ್ಯಾಪಾರಿಗಳು ಶೇ.1 ರಷ್ಟು ಜಿಎಸ್ ಟಿ ಪಾವತಿ ಮಾಡಬೇಕೆಂಬ ನಿಯಮವಿದೆ.
ಜಿಎಸ್ ಟಿ ಸಂಯೋಜನೆಯನ್ನು ಮತ್ತಷ್ಟು ಆಕರ್ಷಕವಾಗಿರುವಂತೆ ಮಾಡಲು ಈಗ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ನೇತೃತ್ವದ ರಾಜ್ಯ ಹಣಕಾಸು ಸಚಿವರ ಸಮಿತಿ ಕೆಲವು ಸಲಹೆಗಳನ್ನು ನೀಡಿದ್ದು, ಜಿಎಸ್ ಟಿ ಕಾಂಪೋಸಿಷನ್ ಯೋಜನೆಯಡಿ ಬಾರದ ಎಸಿ ಹಾಗೂ ನಾನ್ ಎಸಿ ರೆಸ್ಟೋರೆಂತ್ ಗಳ ನಡುವಿನ ವರ್ಗೀಕರಣವನ್ನು ತೆಗೆದುಹಾಕಿ, ಎಸಿ ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳಿಗೆ ಇನ್ ಪುಟ್ ಕ್ರೆಡಿಟ್ ಸಹಿತ ಶೇ.12 ರಷ್ಟು ತೆರಿಗೆ ವಿಧಿಸಬೇಕು ಎಂದು ಹೇಳಿದೆ.
ಇದೇ ವೇಳೆ 5 ಸ್ಟಾರ್ ಹೋಟೆಲ್ ನ ವರ್ಗೀಕರಣವನ್ನು ತೆಗೆದುಹಾಕಿ 7,500 ಕ್ಕಿಂತ ಹೆಚ್ಚು ರೂಂ ಟಾರಿಫ್ ಇರುವ ಯಾವುದೇ ಹೋಟೆಲ್ ಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸುವುದು ಸೂಕ್ತ ಎಂದು ಸಚಿವರ ಸಮಿತಿ ಅಭಿಪ್ರಾಯಪಟ್ಟಿದೆ.
ನ.10 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಲಹೆಗಳನ್ನು ಪರಿಗಣಿಸಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.