ಕುಮಟಾ: ಪ್ರಸಕ್ತ ಸಾಲಿನಿಂದ ಕರ್ನಾಟಕ ಗೇರು ಅಭೀವೃದ್ಧಿ ಮಂಡಳಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ಧ್ವನಿ ಎತ್ತಿದ ಮಂಡಳಿಯ ನಿರ್ದೇಶಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಅವರನ್ನು ಅಭಿನಂದಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೇರು ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಮಂಡಳಿ ಈವರೆಗೂ ರಾಜ್ಯೋತ್ಸವ ಆಚರಿಸದಿರುವ ಕುರಿತು ಮಾಸ್ಕೇರಿ ನಾಯಕ ಅವರು ಆಕ್ಷೇಪ ವ್ಯಕ್ತಪಡಿಸಿ, ಪ್ರಸಕ್ತ ವರ್ಷದಿಂದ ರಾಜ್ಯದಾದ್ಯಂತ ಇರುವ ಮಂಡಳಿಯ ಎಲ್ಲ ಕಚೇರಿಗಳಲ್ಲಿ ರಾಜ್ಯೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದ್ದರು. ಸಭೆ ಮಾಸ್ಕೇರಿಯವರ ಸಲಹೆಯನ್ನು ಸ್ವೀಕರಿಸಿ ರಾಜ್ಯೋತ್ಸವ ಆಚರಿಸುವಂತೆ ಎಲ್ಲ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿರುವುದು ಆರೋಗ್ಯಕರ ಬೆಳವಣಿಗೆ ಎಂದು ಕರ್ಕಿಕೋಡಿ ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರಿ ಇಲಾಖೆ, ಮಂಡಳಿಗಳು ತುಂಬ ಯಾಂತ್ರಿಕವಾಗಿ ನಡೆಯುತ್ತಿರುತ್ತವೆ ಎಂಬ ವ್ಯಂಗ್ಯ ಬರುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕೇರಿಯವರ ಈ ಗಟ್ಟಿಧನಿ ಎಲ್ಲ ಕಚೇರಿಗಳಲ್ಲಿ ಕನ್ನಡತನ ಮೂಡಿಸಲು ಸಾಧ್ಯ. ಮಂಡಳಿಯ ಅಧ್ಯಕ್ಷ ಬಿ.ಹೆಚ್.ಖಾದರ್, ಕಾರ್ಯಕಾರಿ ಮಂಡಳಿ ನಿರ್ದೇಶಕ ಪ್ರಕಾಶ ಎಸ್. ನೇತಾಲ್ಕರ್ ಐ.ಎಫ್.ಎಸ್., ಕೇಂದ್ರದ ನಿರ್ದೇಶಕ ವೆಂಕಟೇಶ್ ಹುಬ್ಬಳ್ಳಿ, ಮಂಡಳಿಯ ನಿರ್ದೇಶಕರುಗಳಾದ ಪ್ರಕಾಶ್ ಕಲಬಾವಿ, ಅವಿನಾಶ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದ ಸಭೆ ನಿರ್ದೇಶಕ ಮಾಸ್ಕೇರಿಯವರ ಕನ್ನಡಪರ ಆಗ್ರಹವನ್ನು ಮನ್ನಿಸಿದ್ದು ಅಭಿಮಾನದ ಸಂಗತಿ. ಸಾಹಿತಿಯೋರ್ವ ತನ್ನ ಪ್ರವೃತ್ತಿಗೆ ಸಂಬಂಧಪಡದ ಸರಕಾರದ ಮಂಡಳಿಯಲ್ಲಿದ್ದರೂ ಕನ್ನಡದ ಬಾವುಟವನ್ನು ಹೇಗೆ ಹಾರಿಸಬಲ್ಲ ಎಂಬುದಕ್ಕೆ ಮಾಸ್ಕೇರಿ ಎ.ಕೆ.ನಾಯಕ ಅವರ ಈ ಕಳಕಳಿ ಉತ್ತಮ ಉದಾಹರಣೆ ಎಂದು ಕ.ಸಾ.ಪ.ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ನುಡಿದಿದ್ದಾರೆ.

RELATED ARTICLES  ಸರಕಾರದ ಕೋವಿಡ್ ಮಾರ್ಗ ಸೂಚಿಯಂತೆ ಆರಾಧನಾ ಮಹೋತ್ಸವ : ಸಾರ್ವಜನಿಕ ಕಾರ್ಯಕ್ರಮ ಇಲ್ಲ