ಕಾರವಾರ: ನಗರದಾದ್ಯಂತ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ರಸ್ತೆಗಳಲ್ಲಿ ಜನರು ನಿರ್ಭೀತಿಯಿಂದ ಸಂಚರಿಸಲು ಕಷ್ಟಸಾಧ್ಯವಾಗಿದೆ. ರಾತ್ರಿ ವೇಳೆಯಂತೂ ಮನೆ ಸೇರಲು ಹರಸಾಹಸ ಪಡಬೇಕಾಗಿದೆ. ಕಾಜುಬಾಗ, ಸಂಕ್ರಿವಾಡ, ಕೋಡಿಬಾಗ, ಹಬ್ಬುವಾಡ, ಬಾಂಡಿಶಿಟ್ಟಾ, ಕೆಎಚ್‌ಬಿ ಕಾಲೊನಿ, ನಂದನಗದ್ದಾ ಹೀಗೆ ನಗರದ ಅನೇಕ ಬಡಾವಣೆಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳವಾಗಿದೆ. ಬೀದಿಯಲ್ಲಿ ಸಂಚರಿಸುವ ಸೈಕಲ್, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮೈಮೇಲೆ ಎರಗುತ್ತಿವೆ.
ಬೆನ್ನತ್ತಿ ಬಂದ ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಹಲವು ಘಟನೆಗಳೂ ಜರುಗಿವೆ. ಇನ್ನು ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
‘ಕೆಲಸ ಮುಗಿಸಿಕೊಂಡು ರಾತ್ರಿ 9.30ಕ್ಕೆ ನಂದಗದ್ದಾದ ನಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದೆ. ಕಾಜುಬಾಗ ರಸ್ತೆಯಿಂದ ತಿರುವು ಪಡೆದು ಮುಂದೆ ಸಾಗುತ್ತಿದ್ದಂತೆ ಹತ್ತಾರು ಬೀದಿಗಳು ಒಂದೇ ಸಮನೇ ಬೊಗುಳುತ್ತಾ ಅಟ್ಟಾಡಿಸಿಕೊಂಡು ಬಂದಿತು. ಜೀವಭಯದಿಂದ ವಾಹನವನ್ನು ನಿಲ್ಲಿಸದೇ ಮನೆ ತಲುಪಿದೆ. ಹೀಗಾಗಿ ರಾತ್ರಿ ವೇಳೆ ತಿರುಗಾಡಲು ಅಸಾಧ್ಯವಾಗಿದೆ’ ಎನ್ನುತ್ತಾರೆ ನಂದನಗದ್ದಾ ನಿವಾಸಿ ಸುರೇಂದ್ರ.
ನಿದ್ರೆಗೂ ಭಂಗ: ‘ಮೀನು, ಚಿಕನ್ ಹಾಗೂ ಮಟನ್ ಮಾರುಕಟ್ಟೆಯಲ್ಲಿನ ತ್ಯಾಜ್ಯಕ್ಕೆ ಬಾಯಿ ಹಾಕಲು ಬೀದಿನಾಯಿಗಳು ಮುಗಿಬಿದ್ದಿರುತ್ತದೆ. ಇನ್ನೂ ರಸ್ತೆಬದಿಯ ಮಾಂಸಾಹಾರ ಮಳಿಗೆ ಮುಂದೆಯೂ ನಾಯಿಗಳು ದಂಡು ಸುತ್ತುವರಿದಿರುತ್ತದೆ. ಸಂಜೆ ವೇಳೆ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳ ಮೇಲೆ ಈ ನಾಯಿಗಳು ಎರಗುತ್ತವೆ.
ಒಬ್ಬಂಟಿಯಾಗಿ ವಾಯುವಿಹಾರಕ್ಕೆ ಹೋಗುವುದು ಕಷ್ಟವಾಗಿದೆ. ಕೆಲವರು ಕೈಯಲ್ಲಿ ಕೋಲು ಹಿಡಿದು ತೆರಳುವಂತಾಗಿದೆ. ಇಷ್ಟೇ ಅಲ್ಲ ರಾತ್ರಿ ಹೊತ್ತು ಮನೆಯ ಅಂಗಳಕ್ಕೆ ನುಗ್ಗಿ ಒಂದೇ ಸಮನೇ ಅರಚುವುದು ಹಾಗೂ ಬೊಗಳುವುದು ಮಾಡುತ್ತವೆ. ಇದರಿಂದ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ರಾಮಕೃಷ್ಣ ರಸ್ತೆಯ ನಿವಾಸಿ ರಾಜೇಶ್.
ನಿಯಂತ್ರಣಕ್ಕೆ ಕ್ರಮ:
‘ಬೀದಿನಾಯಿಗಳು ಹಾಗೂ ಬಿಡಾಡಿ ದನಕರುಗಳ ಹಾವಳಿ ಹೆಚ್ಚಾಗಿರುವ ಕುರಿತು ನಗರಸಭೆಗೆ ದೂರುಗಳು ಬರುತ್ತಿವೆ. ಸಂತಾನ ಶಕ್ತಿ ಹರಣ ಚಿಕಿತ್ಸೆಯೊಂದೇ ನಾಯಿಗಳ ನಿಯಂತ್ರಣಕ್ಕೆ ಇರುವ ದಾರಿಯಾಗಿದೆ. ಅದನ್ನು ಕೊಲ್ಲಲ್ಲು ಪ್ರಾಣಿದಯಾ ಸಂಘದವರು ಅಡ್ಡಗಾಲು ಹಾಕುತ್ತಾರೆ. ಇನ್ನು ದನಕರುಗಳನ್ನು ಅದರ ಮಾಲೀಕರು ರಸ್ತೆ ಮೇಲೆ ಬಿಟ್ಟುಬಿಟ್ಟಿದ್ದಾರೆ.
ಈ ರೀತಿ ರಸ್ತೆಗೆ ಬಿಡದಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು. ನಂತರ ಬಿಡಾಡಿ ದನಗಳನ್ನು ಹಿಡಿದು ಹೊಸನಗರ ಅಥವಾ ಗೋಕರ್ಣ ಬಳಿಯಿರುವ ರಾಮಚಂದ್ರಾಪುರ ಮಠದ ಗೋಶಾಲೆಗೆ ಬಿಡಲಾಗುವುದು. ಈ ಕುರಿತು ಅವರೊಂದಿಗೆ ಚರ್ಚಿಸಿ, ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ್ ತಿಳಿಸಿದರು.