ಮಾತೃದೇವೋ ಭವ ಎಂಬುದು ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿ ಕಣ್ಮರೆಯಾಗುತ್ತಿರುವ, ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗುತ್ತಿರುವ ಈ ಕಾಲದಲ್ಲಿ ಶ್ರೀ ರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಶ್ರೀ ಭಾರತೀ ವಿದ್ಯಾಲಯವು ಒಂದು ವಿಶಿಷ್ಟ ಸಾಂಪ್ರದಾಯಿಕ ಆಚರಣೆಯನ್ನು ಪುನರುತ್ಥಾನಗೊಳಿಸುತ್ತಿದೆ. ಅದೇ ಮಾತೃ ಪಿತೃ ಪೂಜೆ. ಜನ್ಮದಾತರ ಪಾತ್ರ ಜೀವನದಲ್ಲಿ ಬಲು ದೊಡ್ಡದು. ಮಕ್ಕಳಿಗಾಗಿ ಜೀವನವನ್ನೇ ಸವೆಸುವ ತಾಯ್ತಂದೆಯರನ್ನು ಮಕ್ಕಳು ಗೌರವಿಸುವ ಮನೋಭಾವನೆಯನ್ನು ಬೆಳೆಸುವುದೇ ಈ ಕಾರ್ಯಕ್ರಮದ ಉದ್ದೇಶ.
ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗುರುವಂದನೆಯೊಂದಿಗೆ ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ತಾವು ಕಲಿಯುವ ಶಾಲೆಯ ಶಿಕ್ಷಕರ ಸಮಕ್ಷದಲ್ಲಿ ಪೂಜಿಸಿ ಜನ್ಮದಾತರ ಆಶೀರ್ವಾದ ಪಡೆದುಕೊಂಡರು. ಸಂಸ್ಕಾರದ ಬೆಳಕಿನಲ್ಲಿ ಸಾಧನೆಯ ಹೆಜ್ಜೆಯನ್ನಿಡುವ, ತಮ್ಮ ತಾಯ್ತಂದೆಯರನ್ನು ಬದುಕಿಡೀ ಸಲಹುವ ಶಪಥವನ್ನು ಕೈಗೊಂಡರು.ಜಗತ್ತಿನ ಮಾತಾ ಪಿತೃಗಳಾದ ಪಾರ್ವತಿ ಪರಮೇಶ್ವರರ ನ್ನು ಪೂಜಿಸಿ ನಂತರ ತಮ್ಮ ತಂದೆತಾಯಿಯರಿಗೆ ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಿದರು.
ಪ್ರಾಚಾರ್ಯರು ಹಾಗೂ ಸಹ ಶಿಕ್ಷಕರು ಈ ಮಾತಾ ಪಿತೃ ಪೂಜೆಯ ಮಹತ್ವವನ್ನು ವಿವರಿಸಿದರು. ಪಾಲಕರು ಈ ವಿಶಿಷ್ಟ ಅತ್ಯಪರೂಪದ ಕಾರ್ಯಕ್ರಮದ ಬಗ್ಗೆ ಅತೀವ ಸಂತಸಪಟ್ಟು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುವಂತೆ ಕೋರಿಕೊಂಡರು. ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ, ಮಾತಾಪಿತೃಪೂಜೆಯಂತಹ ಇಂತಹ ಕಾರ್ಯಕ್ರಮಗಳಿಂದ ಮಗುವಿನ ಸರ್ವಾಂಗೀಣ ವಿಕಾಸವಾಗುವುದು. ಪಾಶ್ಚಾತ್ಯರ ಕ್ರಮವಾದ ಪ್ರಸಕ್ತ ಭಾರತದಲ್ಲಿ ಕಾಣುತ್ತಿರುವ ವೃದ್ಧಾಶ್ರಮದಂತಹ ಪಿಡುಗನ್ನು ಇಂತಹ ಕಾರ್ಯಕ್ರಮಗಳಿಂದ ತೊಲಗಿಸಬಹುದು ಎಂದು ಹಲವಾರು ಪಾಲಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನೆರೆದಿದ್ದ ಸಮಸ್ತ ಜನಸ್ತೋಮಕ್ಕೆ ಪ್ರಸಾದ ವಿತರಣೆ ಮಾಡಲಾಯಿತು.