ಕಾರವಾರ: ಮಾತೃಪೂರ್ಣ ಯೋಜನೆ ಅನುಷ್ಠಾನ ನಿಯಮ ಸರಳೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಾತೃಪೂರ್ಣ ಯೋಜನೆ ಅನುಷ್ಠಾನ ನಿಯಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಳಗೊಳಿಸುವ ಅಗತ್ಯವಿದೆ. ಇದು ರಾಜ್ಯ ಸರ್ಕಾರದ ಹಂತದಲ್ಲೇ ಆಗಬೇಕಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು.
ಮಾತೃಪೂರ್ಣ ಯೋಜನೆ ಗರ್ಭಿಣಿ ಮತ್ತು ಹೆರಿಗೆಯಾದ ತಾಯಂದಿರಿಗೆ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಠಿಕ ಆಹಾರ ಒದಗಿಸುವ ಯೋಜನೆಯಾಗಿದ್ದು ಉತ್ತರ ಕನ್ನಡ ಜಿಲ್ಲೆ ಬಹುತೇಕ ಗುಡ್ಡಗಾಡು ಪ್ರದೇಶ, ಮಲೆನಾಡು ಮತ್ತು ಕರಾವಳಿ ಪ್ರದೇಶದ ಜಿಲ್ಲೆಯಾಗಿದೆ. 3 ತಿಂಗಳ ಗರ್ಭಿಣಿಯಿಂದ ಹೆರಿಗೆಯಾದ 6 ತಿಂಗಳವರೆಗೆ ಪೌಷ್ಠಿಕ ಆಹಾರ ಒದಗಿಸಬೇಕು. ಈ ಹಂತದಲ್ಲಿ ದೂರದ ಮನೆಯಿಂದ ಪೌಷ್ಠಿಕ ಆಹಾರಕ್ಕಾಗಿ ಅಂಗನವಾಡಿಗಳಿಗೆ ಬರುವುದು ಫಲಾನುಭವಿಗಳಿಗೆ ಕಷ್ಟಸಾಧ್ಯವಾಗಿದ್ದು ಸ್ವಸಹಾಯ ಸಂಘಗಳ ಮೂಲಕ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಲಹೆ ನೀಡಿದರು.

RELATED ARTICLES  ಕುಮಟಾದಲ್ಲಿ ಭಂಡಾರಿ ಸಾಮಾಜದ ಸಾಮೂಹಿಕ ಸತ್ಯನಾರಾಯಣ ಪೂಜೆ

ಅಲ್ಲದೆ, ಕರಾವಳಿ ಭಾಗದ ಪ್ರದೇಶಗಳಲ್ಲಿ ಅತಿಹೆಚ್ಚು ಉಷ್ಣಾಂಶ ಇರುವುದರಿಂದ ಗರ್ಭಿಣಿ ಮತ್ತು ತಾಯಂದಿರು ಬಿಸಿಲು ಕಾಲದಲ್ಲಿ ಹೊರನಡೆಯಲು ಕಷ್ಟಸಾಧ್ಯವಾಗಿರುವುದರಿಂದ ಯೋಜನೆ ಅನುಷ್ಠಾನ ನಿಯಮಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಉಸ್ತುವಾರಿ ಕಾರ್ಯದರ್ಶಿಯವರು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

RELATED ARTICLES  ಆದಿಕವಿ ವಾಲ್ಮೀಕಿಗೆ ನಮನ ;ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಾಲ್ಮೀಕಿ ಜಯಂತಿ

ಉಳಿದಂತೆ ಗ್ರಾಮೀಣ ಕುಡಿಯುವ ನೀರು ಯೋಜನೆ, ವಸತಿ ಯೋಜನೆ, ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳು, ಬೆಳೆವಿಮೆ, ಹೊಸ ಪಡಿತರ ಚೀಟಿಗಳ ವಿತರಣೆ, ಮುಖ್ಯಮಂತ್ರಿಗಳ ಅನಿಲಭಾಗ್ಯಯೋಜನೆ ಫಲಾನುಭವಿಗಳ ವಿವರ, ನಗರಾಭಿವೃದ್ಧಿ ಯೋಜನೆಗಳು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಅನುಷ್ಠಾನ ಹೀಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರನಾಯಕ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.