ಭಟ್ಕಳ :ತಾಲೂಕಾ ಆಡಳಿತದಿಂದ ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ನಾಡು ನುಡಿ,ಕಲೆ ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ನೇತ್ರಾವತಿ ಆಚಾರ್ಯ
ಕಳೆದ ಅನೇಕ ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿಕೃಷಿ ಮಾಡುತ್ತ ಬಂದಿದ್ದಾರೆ.ತಮ್ಮ ಕವನಗಳ ಗಟ್ಟಿತನದಿಂದಾಗಿಯೆ ಗುರುತಿಸಿಕೊಂಡಿರುವ ಇವರು ಈಗಾಗಲೆ ಎರಡು ಕೃತಿಗಳನ್ನು ಹೊರತಂದಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಸಮ್ಮೇಳನಗಳಲ್ಲಿ ಕವನ ವಾಚಿಸಿ ಹಿರಿಯ ಕವಿಗಳ ಮೆಚ್ಚುಗೆ ಗಳಿಸಿದ್ದಾರೆ.
ರಂಗಕಲೆ ಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕ್ರತರಾಗಿರುವ ನಾರಾಯಣ ನಾಯ್ಕ
ವೃತ್ತಿಯಲ್ಲಿ ಶ್ರೀವಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರಲ್ಲದೇ ಪ್ರವೃತ್ತಿಯಲ್ಲಿ ನಾಟಕ ನಿರ್ದೇಶಕರಾಗಿ,ಅತ್ಯುತ್ತಮ ಕಾರ್ಯಕ್ರಮ ನಿರೂಪಕರಾಗಿ, ಸಮಾಜ ವಿಜ್ಞಾನ ಸಂಘದ ಅಧ್ಯಕ್ಷರಾಗಿ ಬಹುಮುಖ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಂಗಕಲೆಯಲ್ಲಿ ಆಸಕ್ತಿ ಮೂಡಿಸುತ್ತ ಶಾಲಾ ವಿದ್ಯಾರ್ಥಿಗಳಿಗೆ ನಾಟಕ ಅಭಿನಯದ ತರಬೇತಿ ನೀಡಿ ಸತತ ಮೂರು ವರ್ಷಗಳ ಕಾಲ ಐತಿಹಾಸಿಕ ನಾಟಕ -ಸಂಗೊಳ್ಳಿ ರಾಯಣ್ಣ,ಪೌರಾಣಿಕ ನಾಟಕ- ಭೀಮ ಘಟೋತ್ಗಜ ಮತ್ತು ಸಾಮಾಜಿಕ ನಾಟಕ -ಹಸಿವು ಈ ನಾಟಕಗಳನ್ನು ನಿರ್ದೇಶಿಸಿ ರಾಜ್ಯಮಟ್ಟಕ್ಕೆ ಕರೆದೊಯ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,ಮಾತ್ರವಲ್ಲ ಉಡುಪಿ ಜಿಲ್ಲೆಯಲ್ಲಿ ನಡೆದ ಡ್ರಾಮಾ ಜ್ಯೂನಿಯರ್ಸ ಸ್ಪರ್ಧೆಯಲ್ಲಿ ಇವರ ನಿರ್ದೇಶನದ ನಾಟಕ ತಂಡದ ವಿದ್ಯಾರ್ಥಿಗಳು ಬಹುಮಾನ ಗಳಿಸಿದೆ.
*ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ಪುರಸ್ಕೃತ ರಾದ ನಾಗರಾಜ ಮಧ್ಯಸ್ಥ ಅವರು ಯಕ್ಷಗಾನ ಕಲಾವಿದರು ಮಾತ್ರವಲ್ಲ ಕಳೆದ ಇಪ್ಪತ್ತೈದು ವರ್ಷಗಳಿಂದ ಗೋಳಿಕುಂಬ್ರಿ ಯಕ್ಷಗಾನ ಮೇಳವನ್ನು ಕಟ್ಟಿ ಮೇಳವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಯಕ್ಷಗಾನ ಸಪ್ತಾಹ ನಡೆಸಿಕೊಂಡು ಬರುತ್ತ ಯಕ್ಷಗಾನ ಕ್ಷೇತ್ರಕ್ಕೆ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.ಸದ್ದಿಲ್ಲದೆ ಈ ನಾಡಿನ ಗಂಡು ಮೆಟ್ಟಿನಕಲೆಯಾಗಿರುವ ಅಪ್ಪಟ ಕನ್ನಡ ಭಾಷೆ ಇಂದು ನಮಗೆ ಕಾಣಸಿಗುವ ಕಲೆಯಾಗಿರುವ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಸಂಗೀತ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಪುರಸ್ಕ್ರತರಾಗಿರುವದಿವಾಕರರ ಹೆಬ್ಬಾರರು
ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡಿದುಕೊಂಡದ್ದಾರೆ ದಿವಾಕರ ಹೆಬ್ಬಾರ ರವರು ಜಿಲ್ಲೆಯ ಹಿರಿಯ ಸಂಗೀತ ವಿದ್ವಾಂಸ ಅಶೋಕ ಹುಗ್ಗಣ್ಣವರ್ ಅವರ ಶಿಷ್ಯ. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತ ಕಳೆದ ಇಪ್ಪತ್ತು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಸದ್ದಿಲ್ಲದೆ ಸಂಗೀತದ ಆರಾಧನೆಯನ್ನು ಮಾಡುತ್ತಾ ಬಂದಿದ್ದಾರೆ .
ಭಟ್ಕಳ ತಾಲೂಕಿನಲ್ಲಿ ಮಾತ್ರವೇ ಕಂಡುಬರುವ ವಿಶಿಷ್ಟ ಜನಪದ ಮತ್ತು ಧಾರ್ಮಿಕ ಆಚರಣೆ ಹರಿಸೇವೆ. ಇದರಲ್ಲಿ ಕಳಸ ಹೊತ್ತು ಕುಣಿಯುತ್ತ ಬರುವ ದೃಶ್ಯವಂತೂ ನಯನ ಮನೋಹರ. ಕಳಸದ ಕುಣಿತಕ್ಕೆ ಹೆಸರಾಗಿರುವ ಮಾಸ್ತಿ ಮೊಗೇರ್ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಕ್ಷೇತ್ರದ ಪ್ರತಿಭೆ ಹರೀಶ ನಾಯ್ಕ, ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿ ಆಟಗಾರರಾಗಿ ಭಟ್ಕಳದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿದವರು. ಕಬಡ್ಡಿ ಕ್ರೀಡೆಯ ಭರವಸೆಯ ಆಟಗಾರರಾಗಿ ಹಂತಹಂತವಾಗಿ ತಾಲೂಕು,ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ಇಂದು ರಾಷ್ಟ್ರ ಮಟ್ಟದ ಆಟಗಾರರಾಗಿ ಗುರುತಿಸಿಕೊಂಡಿರುವ ಹರೀಶ್ ನಾಯ್ಕ ಅವರು ಈ ಬಾರಿಯ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ನೆಲದ ಸಾಹಿತ್ಯ,ಸಂಗೀತ,ರಂಗಕಲೆ,ಯಕ್ಷಗಾನ,ಕ್ರೀಡಾ ಕ್ಷೇತ್ರಗಳಿಗೆ ಕೊಡುಗೆಗಳನ್ನು ನೀಡುತ್ತ ಈ ನೆಲದ ಹಿರಿಮೆ ಗರಿಮೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ನಮ್ಮ ತಾಲೂಕಿನ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಭಟ್ಕಳ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.