ಕಾರವಾರ: ಇಬ್ಬರು ಮಕ್ಕಳೊಂದಿಗೆ ಸುಮಾರು ಒಂದು ವರ್ಷದ ಹಿಂದೆ ನಗರದ ಮಾರುಕಟ್ಟೆಯಲ್ಲಿ ಅನಾಥ ಸ್ಥಿತಿಯಲ್ಲಿ ಕುಳಿತಿದ್ದ ಜಾರ್ಖಂಡ್ ಮೂಲದ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯದೊಂದಿಗೆ ಮರಳಿ ಮನೆಗೆ ತಲುಪಿಸಲು, ಜನಶಕ್ತಿ ವೇದಿಕೆಯ ಮಾಧವ ನಾಯಕ ಅವರು ನೆರವಾಗಿದ್ದಾರೆ.
ಕಳೆದ 2016ರ ನವೆಂಬರ್ 19 ರಂದು ‘ಮಾರುಕಟ್ಟೆಯ ಬಳಿ ಅನಾಥ ಸ್ಥಿತಿಯಲ್ಲಿ ಮಕ್ಕಳನ್ನು ಹಿಡಿದುಕೊಂಡು ಮಹಿಳೆಯೊಬ್ಬಳು ಕುಳಿತಿದ್ದಾಳೆ’ ಎನ್ನುವ ಮಾಹಿತಿ ಬಂದ ಹಿನ್ನಲೆಯಲ್ಲಿ ಅವರು ಸ್ಥಳಕ್ಕೆ ತೆರಳಿದ್ದರು. ಬಳಿಕ ಆಕೆಯನ್ನು ವಿಚಾರಿಸಲು ಮುಂದಾದಾಗ ಸರಿಯಾಗಿ ಭಾಷೆ ಬರದ ಕಾರಣ ಆಕೆಯ ಸ್ವಂತ ಊರು ತಿಳಿಯುವುದು ಕಷ್ಟವಾಗಿತ್ತು. ಆದರೆ ಆಕೆಯ ಪತಿ ರೈಲಿನಲ್ಲಿ ಕರೆದುಕೊಂಡು ಬಂದು ಅವರನ್ನು ಇಲ್ಲಿ ಬಿಟ್ಟು ಪರಾರಿಯಾಗಿರುವುದು ತಿಳಿದುಬಂದಿತ್ತು.
ಬಳಿಕ ಆಕೆಯನ್ನು ಕರೆ ತಂದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಇರಿಸಿ ಆಕೆಯ ಊರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಅವರು ಒತ್ತಾಯ ಮಾಡಿದ್ದರು.
ಆನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಹಾಗೂ ಸಿಬ್ಬಂದಿ ವಿವಿಧೆಡೆ ಸಂಪರ್ಕಿಸಿ ಈಕೆಯ ಮಾಹಿತಿಯನ್ನು ಕಲೆ ಹಾಕಿದ್ದಾಗ, ಈಕೆ ಜಾರ್ಖಂಡ್‌ನ ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎಂದು ತಿಳಿದು ಬಂದಿತ್ತು. ಬಳಿಕ ಆಕೆಯ ಪೋಷಕರ ಮಾಹಿತಿ ಕಲೆ ಹಾಕಿ ಅವರಿಗೆ ತಿಳಿಸಿದ್ದರು.
ಆಕೆಯ ಊರು ಪತ್ತೆಯಾದ ಹಿನ್ನಲೆಯಲ್ಲಿ ಮಂಗಳವಾರ ಮಾಧವ ನಾಯಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಅವರನ್ನು ರೈಲಿನಲ್ಲಿ ಮರಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.