ಸಿದ್ದಾಪುರ: ಕನ್ನಡಾಂಬೆ ನೆಲೆಸಿರುವ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯ ಕನ್ನಡ ನಾಡಿಗೆ ಪರಿಚಿತ. ಆದರೆ ಈ ದೇವಾಲಯಕ್ಕೆ ಸಾಗುವ ರಸ್ತೆ ಶೋಚನೀಯ ಸ್ಥಿತಿ ತಲುಪಿದೆ. ಸಿದ್ದಾಪುರ–ಕುಮಟಾ ರಸ್ತೆಯಿಂದ ಗುಡ್ಡವೇರಿ ದೇವಾಲಯಕ್ಕೆ ಸಾಗುವ ಈ ರಸ್ತೆ 600 ಮೀಟರ್ ದೂರವಿದೆ. ಈಗ ಈ ರಸ್ತೆಯಲ್ಲಿ ಗುಂಡಿಗಳನ್ನು ಬಿಟ್ಟರೇ ಬೇರೆ ಏನೂ ಇಲ್ಲ. ಈ ದೇವಾಲಯದ ಸುಂದರ ಪರಿಸರಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಈ ರಸ್ತೆ ಕಾಣುತ್ತಿದೆ.
‘ಈ ರಸ್ತೆಯ ಡಾಂಬರೀಕರಣ ಆಗಿ 18–20 ವರ್ಷ ಆಗಿರಬಹುದು.ಇತ್ತೀಚಿನ ವರ್ಷಗಳಲ್ಲಿ ಈ ರಸ್ತೆಯ ಪಕ್ಕ 150 ಮೀಟರ್ ಕಾಂಕ್ರೀಟ್ ಗಟಾರ ಮಾಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ರೀತಿಯಲ್ಲಿಯೂ ರಸ್ತೆ ದುರಸ್ತಿ ಆಗಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.
‘ನಾವು ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಶಾಸಕರೂ ಸೇರಿದಂತೆ ಎಲ್ಲರಿಗೂ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ ರಸ್ತೆ ಸುಧಾರಣೆ ಆಗಿಲ್ಲ’ ಎಂದು ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಕೆ.ಹೆಗಡೆ ಗುಂಜಗೋಡು ಹೇಳಿದರು.
‘ಕೆಲವು ದಿನಗಳ ಹಿಂದೆ ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಮನವಿಮಾಡಿದ್ದರಿಂದ ರಸ್ತೆಗೆ ಜಲ್ಲಿ ಕಲ್ಲು ಮತ್ತು ಕಲ್ಲಿನ ಪೌಡರ್ ಹಾಕಲಾಯಿತು. ಆದರೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಲ್ಲಿನ ಪೌಡರ್ ತೊಳೆದು ಹೋಯಿತು. ಜಲ್ಲಿ ಕಲ್ಲು ಮಾತ್ರ ಹರಡಿಕೊಂಡು ರಸ್ತೆ ಇನ್ನಷ್ಟು ಅಧ್ವಾನವಾಯಿತು. ಮಂಡಳಿಯಿಂದಲೇ ಹಣ ಖರ್ಚು ಮಾಡಿ, ರಸ್ತೆಯಲ್ಲಿ ಹರಡಿದ್ದ ಆ ಜಲ್ಲಿ ಕಲ್ಲನ್ನು ತೆಗೆಸಿದೆವು’ ಎಂದು ಆಡಳಿತ ಮಂಡಳಿಯ ಮೂಲಗಳು ಹೇಳುತ್ತಿವೆ.
ಬಿಳಗಿ ಅರಸರ ಪರಂಪರೆಯ ಇಮ್ಮಡಿ ಸೋಮಶೇಖರ ನಾಯಕರ ಮಕ್ಕಳಾದ ಭದ್ರಪ್ಪ (ಕ್ರಿ.ಶ.1745-1753) ಮತ್ತು ಬಸವೇಂದ್ರ (ಕ್ರಿ.ಶ.1753–-1764) ಭುವನಗಿರಿಯಲ್ಲಿ ಈ ಕನ್ನಡ ಮಾತೆಯ ದೇವಾಲಯವನ್ನು ಅಭಿವೃದ್ಧಿಪಡಿಸಿದರು. ಇವರಲ್ಲಿ ಕೊನೆಯವನಾದ ಬಸವೇಂದ್ರ ಭುವನಗಿರಿ ದೇವಾಲಯವನ್ನು ಹಾಗೂ ಕೆರೆಯನ್ನು (ಪುಷ್ಕರಣಿ) ನಿರ್ಮಿಸಿದ ಎನ್ನಲಾಗಿದೆ.
ಪ್ರತಿವರ್ಷ ಮಾಘಶುದ್ಧ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ಅದರೊಂದಿಗೆ ನಿಗದಿತ ಕಾಲದಲ್ಲಿ ನವರಾತ್ರಿ ಉತ್ಸವ, ವಸಂತೋತ್ಸವ, ತೆಪ್ಪೋತ್ಸವ ಹಾಗೂ ಪ್ರತಿದಿನವೂ ಪೂಜೆ ಪುನಸ್ಕಾರ ತಪ್ಪದೇ ನಡೆಯುತ್ತದೆ. ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದೇ ದೇವಾಲಯ ವೇದಿಕೆ ಕಲ್ಪಿಸಿಕೊಡುತ್ತದೆ. ಸಾರ್ವಜನಿಕರ ನಿರಂತರ ಆಗಮನ ಇರುವ ಈ ದೇವಾಲಯಕ್ಕೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸುಧಾರಣೆ ಮಾತ್ರ ಇದುವರೆಗೂ ಮರೀಚಿಕೆಯಾಗಿದೆ.