ಕಾರವಾರ: ಕರ್ನಾಟಕ ಖಾಸಗಿ ವೈದ್ಯಕೀಯ ನಿಯಂತ್ರಣ ಕಾಯ್ದೆಯ ಸಾರ್ವಜನಿಕರಿಗೆ ಹಾಗೂ ವೈದ್ಯರ ಸೇವೆಗೆ ತೊಂದರೆ ಉಂಟಾಗಲಿದ್ದು, ಅದನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ವೈದ್ಯರುಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ವೈದ್ಯರು, ವೈದ್ಯರ ವಿರೋಧದ ನಡುವೆಯೂ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ನಾವು ನಮ್ಮ ವೃತ್ತಿಯನ್ನು ತ್ಯಜಿಸಬೇಕಾಗುತ್ತದೆ. ಇದರಿಂದ ಮುಂದಾಗುವ ಎಲ್ಲ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಿದೆ ಎಂದರು.
ಸರ್ಕಾರ ಕಾಯ್ದೆಯ ಕುಂದು ಕೊರತೆ ಪರಿಹಾರ ಸಮಿತಿಯನ್ನು ಕೈಬಿಡಬೇಕು. ಚಿಕಿತ್ಸೆ ವೈಫಲ್ಯದಿಂದ, ಆಸ್ಪತ್ರೆಗಳ ವೆಚ್ಚಗಳ ಏರುಪೇರಿನ ಕಾರಣಕ್ಕೆ ವೈದ್ಯರನ್ನು ಜೈಲುಪಾಲು ಮಾಡುವುದು ಸರಿಯಲ್ಲ. ಆಸ್ಪತ್ರೆಗಳ ದರವನ್ನು ಪರಿಷ್ಕರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ವಕೀಲರು, ಅಕೌಂಟೆಂಟ್ ಗಳು, ಸಿನಿಮಾ ನಟರಿಗೂ ಇಲ್ಲದ ಕಟ್ಟುಪಾಡುಗಳು ವೈದ್ಯರಿ ಬೇಡ ಎಂದು ಒತ್ತಾಯಿಸಿದರು.