ನವದೆಹಲಿ: ಮೊಬೈಲ್ ಸಂಖ್ಯೆ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಲ್ಲ ಮೊಬೈಲ್ ಸಂಖ್ಯೆಗಳಿಗೂ ಫೆಬ್ರವರಿ 6ರೊಳಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ತನ್ನ ನಿರ್ಧಾರ ಸಲ್ಲಿಕೆ ಮಾಡಿರುವ ಕೇಂದ್ರ ಸರ್ಕಾರ, ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆ ಲಿಂಕ್ ಮಾಡುವ ಅಂತಿಮ ದಿನಾಂಕವನ್ನು ಸುಪ್ರೀಂ ಕೋರ್ಟ್ ಸ್ವತಃ ನಿಗದಿ ಪಡಿಸಿರುವುದರಿಂದ ಅದನ್ನು ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ, ಅಂತೆಯೇ ತಾನು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಿಸುವ ಅಂತಿಮ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಿದ್ದಾಗಿ ತಿಳಿಸಿದೆ.

ದೇಶದ ಎಲ್ಲಾ ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯ ಜೊತೆ ಫೆಬ್ರವರಿ 6ರೊಳಗೆ ಇ-ಕೆವೈಸಿ ಪರಿಶೀಲನೆಯನ್ವಯ ಲಿಂಕ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಅಂತೆಯೇ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲು ಇನ್ನು ಮುಂದೆ ಆಧಾರ್ ಕಡ್ಡಾಯವೆಂದು ಸರ್ಕಾರ ಸ್ಪಷ್ಟಪಡಿಸಿದೆ. ಒಟ್ಟು 113 ಪುಟಗಳ ಕೇಂದ್ರ ಸರ್ಕಾರದ ಈ ಹೊಸ ಅಫಿಡವಿಟ್ ಅನ್ನು ವಕೀಲ ಝೊಹೆಬ್ ಹುಸೈನ್ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ಸ್ವತಃ ಮೊಬೈಲ್ ಫೋನ್ ಸಂಖ್ಯೆಗೆ ಆಧಾರ್ ಜೋಡಿಸುವ ಅಂತಿಮ ದಿನಾಂಕವನ್ನು ಫೆಬ್ರವರಿ 6ಕ್ಕೆ ನಿಗದಿ ಮಾಡಿತ್ತು ಎಂದು ಹೇಳಿದೆ.

RELATED ARTICLES  ಬೈಕ್ ಹಾಗೂ ಆಟೋ ಓಡಿಸಿ ಸರಳತೆ ಮೆರೆದ ಸ್ಪೀಕರ್..!

ಈ ಹಿಂದೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಜೋಡಿಸುವ ಆದೇಶವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯೊಂದರ ವಿಚಾರಣೆ ವೇಳೆ ಸೋಮವಾರ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ಸರ್ಕಾರದ ಪ್ರತಿಕ್ರಿಯೆಯನ್ನು ಮುಂದಿನ ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ಗುರವಾರವೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಅಫಿಡವಿಟ್ ಮೂಲಕ ಸಲ್ಲಿಕೆ ಮಾಡಿದೆ.

ಮಾರ್ಚ್ 31ರವರೆಗೆ ಆಧಾರ್ ಜೊತೆ ಲಿಂಕ್ ಮಾಡಿಲ್ಲ ಎಂಬ ಕಾರಣಕ್ಕೆ ಯಾವುದೇ ಬ್ಯಾಂಕ್ ಖಾತೆಗಳನ್ನು ಅನೂರ್ಜಿತಗೊಳಿಸಲಾಗುವುದಿಲ್ಲ, ಆದರೆ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ಆಧಾರ್ ಅನ್ನು ಕಡ್ಡಾಯವಾಗಿ ಹಾಜರುಪಡಿಸಲೇ ಬೇಕು. ಹಾಲಿ ಖಾತೆದಾರರಿಗೆ ಆಧಾರ್ ಪರಿಶೀಲನೆ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದ್ದು, ಅಲ್ಲಿಯವರೆಗೆ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ತನ್ನ ಅಫಿಡವಿಟ್ ನಲ್ಲಿ ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದೆ.

RELATED ARTICLES  ದಿನಾಂಕ 29/06/2019 ರ ದಿನ ಭವಿಷ್ಯ ಇಲ್ಲಿದೆ.

ಇಷ್ಟು ಮಾತ್ರವಲ್ಲದೇ ಆದಾಯ ತೆರಿಗೆ ಸಲ್ಲಿಸಲು ಆಧಾರ್ ಅನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸುವ ಕೇಂದ್ರದ ನಿರ್ಧಾರವನ್ನೂ ಸುಪ್ರೀಂ ಕೋರ್ಟ್ ಅನುಮೋದಿಸಿದ್ದು, ಆಧಾರ್ ಇಲ್ಲದವರಿಗೆ ಹಾಗೂ ಸದ್ಯ ಆಧಾರ್ ಪಡೆದುಕೊಳ್ಳದವರಿಗೆ ಪ್ರಸಕ್ತ ಆರ್ಥಿಕ ವರ್ಷದ ತನಕ ಅವರ ಪ್ಯಾನ್ ಕಾರ್ಡ್ ಅನ್ನು ಅನೂರ್ಜಿತಗೊಳಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ವಿವಿಧ ದೇಶಗಳು ಹಲವು ಸೈಬರ್ ದಾಳಿಗೆ ತುತ್ತಾಗಿರುವುದನ್ನು ಉಲ್ಲೇಖಿಸಿದ ಕೇಂದ್ರ “ಯುಐಡಿಎಐ ಅಥವಾ ಅದರ ಯಾವುದೇ ಸರ್ವರ್ ಗಳು ಇಲ್ಲಿಯ ತನಕ ಇಂತಹ ಸಮಸ್ಯೆ ಎದುರಿಸಿಲ್ಲ” ಎಂದು ತಿಳಿಸಿದೆ.