ತುಮಕೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಉಪ್ಪು ನೀರಿನ ಸಮುದ್ರ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಶುಕ್ರವಾರ ತಾಲ್ಲೂಕಿನ ಹೆಬ್ಬೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಪ್ರಯುಕ್ತ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಏಳಿಗೆಗೆ ಏನೂ ಕೆಲಸ ಮಾಡಿಲ್ಲ ಎಂದು ಯಡಿಯೂರಪ್ಪ ದೂರಿದರು.
ನಾನು ಮುಸ್ಲಿಂ ವಿರೋಧಿಯಲ್ಲ. ಹಿಂದೂ ವಿರೋಧಿಯೂ ಅಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸರ್ವರಿಗೂ ಸಮಬಾಳು. ಎಲ್ಲರೂ ಅಣ್ಣ ತಮ್ಮಂದಿರು ಎಂಬ ಭಾವನೆಯಿಂದ ಆಡಳಿತ ನಡೆಸಿದೆ. ಎಂದೂ ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡಿಲ್ಲ. ಮಾಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತುವುದೆ ಕೆಲಸವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಖಜಾನೆ ಖಾಲಿ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮೂರುವರೆ ವರ್ಷದಲ್ಲಿ ಅರ್ಥಿಕ ಸುಧಾರಣೆ ಕ್ರಮ ಕೈಗೊಂಡು ಖಜಾನೆ ಭರ್ತಿ ಮಾಡಿದರು ಎಂದು ಹೇಳಿದರು.
ಮಂಜುನಾಥನ ಮಹಿಮೆ ಹಗುರವಾಗಿ ಪರಿಗಣಿಸಬಾರದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ತಿಂದು, ಕೋಳಿ ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿದ್ದಾರೆ. ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥನ ಮಹಿಮೆ ಹಗುರವಾಗಿ ಪರಿಗಣಿಸಬಾರದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.