ಯಲ್ಲಾಪುರ: ಸುಸಜ್ಜಿತ ಆಸ್ಪತ್ರೆ ಕಟ್ಟಿ ಅಲ್ಲಿ ವೈದ್ಯಕೀಯ ಸೇವೆಗೆ ಬೇಕಾದ ಎಲ್ಲಾ ವಸ್ತುಗಳನ್ನ ನೀಡಿದ್ದರು ವೈದ್ಯರು ಹಾಗೂ ಸಿಬ್ಬಂದಿಗಳನ್ನ ಮಾತ್ರ ನೇಮಿಸಿದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿಯೋರ್ವಳು ಬಲಿಯಾಗಿದ್ದಾಳೆ.
ಯಲ್ಲಾಪುರ ತಾಲೂಕಿನ ಗೋರ್ಸಗದ್ದೆ ಗ್ರಾಮದ ೨೧ ವರ್ಷದ ರಾಜೇಶ್ವರಿ ಶ್ರೀನಿವಾಸ ನಾಯ್ಕ್ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಶಿವಮೊಗ್ಗದಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ರಾಜೇಶ್ವರಿ ಕ್ಷಯ ರೋಗದಿಂದ ಬಳಲುತ್ತಿದ್ದಳು.
ಕಳೆದ ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ರಾಜೇಶ್ವರಿಗೆ ಎದುರಾಗಿದೆ. ತಕ್ಷಣ ಮನೆಯವರು ಆಕ್ಸಿಜನ್ ಹಾಕಿಸಲು ಸಮೀಪದ ಮಂಚಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿ ಇಲ್ಲದೇ ಬಾಗಿಲು ಹಾಕಿದ ಪರಿಣಾಮ ಬೇರೆ ಆಸ್ಪತ್ರೆಗೆ ಹೋಗುವ ಸ್ಥಿತಿ ಉದ್ಬವಿಸಿತ್ತು. ಬೇರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ವಿದ್ಯಾರ್ಥಿನಿ ರಾಜೇಶ್ವರಿ ಸಾವನ್ನಪ್ಪಿದ್ದು ಸೂಕ್ತ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದೆ ಸಾವನ್ನಪ್ಪಿದ್ದು ನಿಜಕ್ಕೂ ದುರಂತ.
ಒಂದು ವರ್ಷದ ಹಿಂದೆ ಉದ್ಘಾಟಣೆಯಾದ ಆಸ್ಪತ್ರೆ.
ಯಲ್ಲಾಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ಭಾಗ ಮಂಚಿಕೇರಿ ಭಾಗ. ಈ ನಿಟ್ಟಿನಲ್ಲಿ ಸುಮಾರು ೨ ಕೋಟಿಗೂ ಅಧಿಕ ವೆಚ್ಚಮಾಡಿ ಸುಸಜ್ಜಿತ ಆಸ್ಪತ್ರೆ ಬೇಕಾಗುವ ವೈದ್ಯಕೀಯ ಸಾಮಾಗ್ರಿಗಳನ್ನೇಲ್ಲಾ ಸರ್ಕಾರ ಒದಗಿಸಿತ್ತು. ಆದರೆ ಮುಖ್ಯವಾಗಿ ಬೇಕಾದ ಸಿಬ್ಬಂದಿಯನ್ನ ಮಾತ್ರ ನೇಮಕ ಮಾಡಲಿಲ್ಲ.
ಆಸ್ಪತ್ರೆಗೆ ವೈದ್ಯರು, ನರ್ಸ್ ಗಳು, ಔಷದಿ ಕೊಡುವವರು, ಪ್ರಯೋಗಾಲಯದ ಸಿಬ್ಬಂದಿ, ಆಕ್ಸಿಜನ್ ಹಾಕುವ ಸಿಬ್ಬಂದಿ ಯಾರು ಇಲ್ಲ. ವಾರದಲ್ಲಿ ಒಂದೆರಡು ದಿನ ಬೇರೆ ಆಸ್ಪತ್ರೆಯಿಂದ ವೈದ್ಯರು ಬಂದರೆ ಒರ್ವ ನರ್ಸ್ ಹಾಗೂ ಜವಾನ ಮಾತ್ರ ಆಸ್ಪತ್ರೆಯನ್ನ ನೋಡಿಕೊಳ್ತಾರೆ.
ಆಸ್ಪತ್ರೆಗೆ ಸಿಬ್ಬಂದಿಗಳನ್ನ ನೇಮಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾರು ಸ್ಪಂದಿಸುತ್ತಿಲ್ಲ ಅನ್ನುವುದು ಸ್ಥಳೀಯರ ಹೇಳಿಕೆ. ವಿದ್ಯಾರ್ಥಿನಿ ರಾಜೇಶ್ವರಿ ಸಾವಿನ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಬಳಿ ಕೇಳಿದರೆ ನಾವೇನು ಮಾಡುವುದು ಸರಿಯಾದ ಸಿಬ್ಬಂದಿಗಳೇ ಇಲ್ಲ.ಆಕೆಗೆ ಆಕ್ಸಿಜನ್ ಕೊಡಲು ಸಿಬ್ಬಂದಿಯಾದರು ಬೇಕಾಗಿತ್ತಲ್ಲ ಅನ್ನುತ್ತಾರೆ.
ಬಡ ಕುಟುಂಬದ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ರಾಜೇಶ್ವರಿ ಸಾಕಷ್ಟು ಬಡ ಕುಟುಂಬದಿಂದ ಬಂದವಳು. ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟಿದ್ದರೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಮಗಳನ್ನ ಒದಿಸುತ್ತಿದ್ದಳು. ಮಗಳಿಗೆ ಸರ್ಕಾರಿ ಕೆಲಸ ಕೊಡಿಸಬೇಕೆನ್ನುವುದು ತಾಯಿಯ ಬಯಕೆ. ಅದಕ್ಕಾಗಿಯೇ ಪದವಿಗೆ ಶಿವಮೊಗ್ಗದ ಕಾಲೇಜಿಗೆ ಕಳುಹಿಸಿಕೊಟ್ಟಿದ್ದರು.
ಓದಿನಲ್ಲಿ ಚುರುಕಾಗಿದ್ದ ರಾಜೇಶ್ವರಿ ಎರಡು ವರ್ಷದ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು. ಆದರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರಿ ಈ ಹಿಂದೆ ಇದೇ ರೀತಿ ಉಸಿರಾಟದ ಸಮಸ್ಯೆಗೆ ತುತ್ತಾದಾದ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಕಿಸಿ ಬದುಕುಳಿದಿದ್ದಳು. ಆದರೆ ಇದೀಗ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದಿಗೂ ಸಾಕಷ್ಟು ಕಡೆ ವೈದ್ಯರು ಸಿಬ್ಬಂದಿಗಳು ಇಲ್ಲ. ಸರ್ಕಾರ ಮೊದಲು ಸಿಬ್ಬಂದಿಗಳನ್ನ ವೈದ್ಯರನ್ನ ನೇಮಿಸಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ವೈದ್ಯಕೀಯ ಸೇವೆ ಕೊಡುವಂತಾಗಲಿ.
ರಾಜೇಶ್ಬರಿ ಸಾವಿಗೆ ನಮಗೆ ಪರಿಹಾರ ಬೇಡ. ಆದರೆ ಮಂಚಿಕೇರಿ ಆಸ್ಪತ್ರೆಗೆ ವೈದ್ಯರನ್ನ ಸಿಬ್ಬಂದಿಗಳನ್ನ ನೇಮಿಸಲಿ. ರಾಜೇಶ್ವರಿ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಅನ್ನೋದು ಆಕೆಯ ಮನೆಯವರ ಆಗ್ರಹ..