ಕುಮಟಾ: ವಾಟ್ಸ್ಅಪ್ ನ್ಯೂಸ್ ಗ್ರುಪ್‍ಗಳ ಹಾವಳಿಯಿಂದ ಮಾಧ್ಯಮ ಪ್ರತಿನಿಧಿಗಳಿಗಾಗುವ ಸಮಸ್ಯೆಗಳನ್ನು ನಿಯಂತ್ರಿಸಲು ಅಂಥ ಗ್ರುಪ್‍ಗಳ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡುವ ನಿರ್ಣಯವನ್ನು ಶನಿವಾರ ನಡೆದ ಕುಮಟಾ ಪತ್ರಕರ್ತರ ಸಭೆಯಲ್ಲಿ ಕೈಗೊಳ್ಳಲಾಯಿತು.

ಹಿರಿಯ ಪತ್ರಕರ್ತರಾದ ಅನ್ಸಾರ್ ಶೇಖ್ ಮತ್ತು ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ತಾಲೂಕಿನ ಎಲ್ಲ ಪತ್ರಕರ್ತರು ವಾಟ್ಸ್‍ಅಪ್ ನ್ಯೂಸ್ ಗ್ರುಪ್‍ಗಳಿಂದಾದ ಕಹಿ ಅನುಭವಗಳ ಬಗೆಗೆ ವಿವರಿಸಿದರು. ಕುಮಟಾದಲ್ಲಿ ವಾಟ್ಸ್‍ಅಪ್ ನ್ಯೂಸ್ ಗ್ರುಪ್‍ಗಳ ಹಾವಳಿ ಜಾಸ್ತಿಯಾಗಿದ್ದು, ಆ ಗ್ರುಪ್‍ನ ಪ್ರತಿನಿಧಿಗಳು ತಮ್ಮದೆ ಐಡಿ ಕಾರ್ಡ್‍ಗಳನ್ನು ಹಾಕಿಕೊಂಡು ಸುದ್ದಿಗೋಷ್ಠಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಫೋಟೊ ಅಥವಾ ವಿಡಿಯೋ ಮಾಡುವಾಗ ಮೊಬೈಲ್ ಹಿಡಿದು ತೊಂದರೆ ನೀಡುವ ಜೊತೆಗೆ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಾರೆ. ಯಾವುದೇ ಅಪಘಾತ ಮತ್ತು ಅಪರಾಧ ಪ್ರಕರಣಗಳು ನಡೆದರೆ, ಕ್ಷಣ ಮಾತ್ರದಲ್ಲಿ ಆ ಸ್ಥಳಕ್ಕೆ ತುಲುಪಿ, ಪ್ರಕರಣವನ್ನು ಇತ್ಯರ್ಥ ಮಾಡುವಲ್ಲಿ ಎರಡು ಪಕ್ಷಗಾರರ ಹಾಗೂ ಪೋಲೀಸರ ನಡುವೆ ಮಧ್ಯವರ್ತಿಗಳಾಗಿ ಸೆಟ್ಲ್‍ಮೆಂಟ್ ಮಾಡುವ ಮಟ್ಟಿಗೆ ಪೋಲೀಸ್ ಅಧಿಕಾರಿಗಳ ಮೇಲೂ ಹಿಡಿತ ಸಾಧಿಸಿದ್ದಾರೆ. ಎಷ್ಟೊ ಪ್ರಕರಣಗಳಲ್ಲಿ ಎಫ್‍ಐಆರ್ ಆಗದೆ ಮಾಹಿತಿಯೇ ನೀಡುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳುವ ಪೋಲೀಸ್ ಅಧಿಕಾರಿಗಳು, ಈ ವಾಟ್ಸ್‍ಅಪ್ ನ್ಯೂಸ್ ಗ್ರುಪ್‍ಗಳ ಪ್ರತಿನಿಧಿಗಳಿಗೆ ಕ್ಷಣ ಮಾತ್ರದಲ್ಲಿ ಎಲ್ಲ ಮಾಹಿತಿಗಳನ್ನು ನೀಡುಮ ಮಟ್ಟಿಗೆ ಪೋಲೀಸರು ಅವರೊಂದಿಗೆ ಆತ್ಮೀಯತೆ ಗಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ವರದಿಗಾರರಂತೆ ತೆರಳುವುದರಿಂದ ಸಮಾಜದಲ್ಲಿ ನೈಜ ವರದಿಗಾರರ್ಯಾರೆಂಬುದೆ ಜನರಲ್ಲಿ ಗೊಂದಲ ಮೂಡಿಸುವಂತಾಗಿದೆ. ಈ ಗ್ರುಪ್‍ಗಳ ಅಸಮರ್ಪಕ ಕಾರ್ಯ ವೈಖರಿಯ ಮೂಲಕ ಸಾಮಾಜಿಕ ಸ್ವಾಥ್ಯವನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಂಥ ವಾಟ್ಸ್‍ಅಪ್ ನ್ಯೂಸ್ ಗ್ರುಪ್‍ಗಳ ಹಾವಳಿಯನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವ ಜತೆಗೆ ಈ ಗ್ರುಪ್‍ಗಳನ್ನು ಪ್ರತಿಬಂಧಿಸುವಂತೆ ಒತ್ತಾಯಿಸಬೇಕು. ಅಲ್ಲದೆ ವಾಟ್ಸ್‍ಅಪ್‍ಗಳ ಕಾನೂನಾತ್ಮಕ ಮಾನ್ಯತೆಯ ಕುರಿತು ಜನರಲ್ಲಿ ಜಿಜ್ಞಾಸೆ ಇದೆ. ಇದರ ವಿರುದ್ಧ ಕಾನೂನು ಕ್ರಮಕ್ಕೆ ಅಗತ್ಯ ಕಾರ್ಯತಂತ್ರವನ್ನು ರೂಪಿಸಬೇಕೆಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಬಳಿಕ ಎಲ್ಲ ಪತ್ರಕರ್ತರು ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯ ಅವರನ್ನು ಭೇಟಿ ಮಾಡಿ, ದೂರಿದರು. ಅಲ್ಲದೆ ಇಂಥ ಗ್ರೂಪ್‍ಗಳಿಂದ ಪತ್ರಕರ್ತರ ಗೌರವಕ್ಕು ಚ್ಯುತಿ ಉಂಟಾಗಿದೆ ಎಂದು ತಿಳಿಸಿದರು.

RELATED ARTICLES  ದುರವಸ್ಥೆಯಲ್ಲಿರುವ ಶಿರಸಿ-ಕುಮಟಾ ಹೆದ್ದಾರಿ : ಹೇಳ ತೀರದು ವಾಹನ ಸವಾರರ ಗೋಳು

ಈ ಬಗ್ಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯ ಅವರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಕೃಷ್ಣ ಅಬ್ಬೆಮನೆ, ಎಂ.ಜಿ.ನಾಯ್ಕ, ಶಂಕರ ಶರ್ಮ, ರಾಘವೇಂದ್ರ ದಿವಾಕರ್, ಸದಾಶಿವ ಹೆಗಡೆ, ನಾಗರಾಜ ಪಟಗಾರ, ಗಣೇಶ ರಾವ್, ರವಿ ಗಾವಡಿ, ಚರಣರಾಜ್ ನಾಯ್ಕ, ಪ್ರವೀಣ ಹೆಗಡೆ, ಎಂ.ಎನ್.ಭಟ್, ಗಣಪತಿ ನಾಯ್ಕ, ಮಯೂರ ಪಟಗಾರ, ಪವನ ಹೆಗಡೆ, ಅಣ್ಣಪ್ಪ ಮಡಿವಾಳ ಇದ್ದರು.

RELATED ARTICLES  ಬಾವಿಗೆ ಇಳಿದ ಮೂವರ ಸಾವು.