ಕಾರವಾರ:ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಕಾರವಾರ– ಅಂಕೋಲಾ ವಿಧಾನಸಭಾ ವ್ಯಾಪ್ತಿಯ ಪ್ರವಾಸಿ ತಾಣಗಳ ರಸ್ತೆಗಳ ಅಭಿವೃದ್ಧಿಗಾಗಿ ೪ ಕಾಮಗಾರಿಗೆ ಒಟ್ಟೂ 2 ಕೋಟಿ ರೂ. ಅನುದಾನ ಮಂಜೂರಿಯಾಗಿದೆ ಎಂದು ಶಾಸಕ ಸತೀಶ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಡಿ ಜಿಲ್ಲೆ ಎಂದೂ ಕಂಡಿರದಷ್ಟು ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ತಂದಿದ್ದಾರೆ. ಆದರೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆಯವರಿಗೆ ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದನ್ನು ಅವರು ಮಂಜೂರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಅಭಿವೃದ್ದಿ?:
ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ಮಿರ್ಜಾನ್‌ನಿಂದ ಹಾಗೂ ಅಂಕೋಲಾ ಬ್ರಹ್ಮೂರಿನಿಂದ ಕೂಡು ರಸ್ತೆ ಅಭಿವೃದ್ಧಿಗೆ ₨ 1 ಕೋಟಿ, ಕಾರವಾರದ ತೊಡುರು ಪಂಚಾಯ್ತಿ ವ್ಯಾಪ್ತಿಯ ಮಂಜಲೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ₨ 50 ಲಕ್ಷ, ಮುಡಗೇರಿ ಪಂಚಾಯ್ತಿ ವ್ಯಾಪ್ತಿಯ ಹೊಸಾಳಿ ಮಹಾದೇವಸ್ಥಾನದಿಂದ ಅರಗಾ ಗಣಪತಿ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿಗೆ ₨ 50 ಲಕ್ಷ ಬಿಡುಗಡೆಯಾಗಿದೆ. ಅನುದಾನ ಮಂಜೂರಿಗೆ ಸಹಕರಿಸಿದ ಸಚಿವರಿಗೆ ಎಂದು ಶಾಸಕ ಸೈಲ್ ಅಭಿನಂದನೆ ತಿಳಿಸಿದ್ದಾರೆ.