ಅಂಕೋಲಾ: ‘ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಜನ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಹೇಳಿದರು.
ಇತ್ತೀಚೆಗೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್ ಸಂಘಟನೆ ಮುಂಚೂಣಿಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 120ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದರು.
‘ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಡ ರೈತರ, ದೀನದಲಿತರ, ಅಲ್ಪಸಂಖ್ಯಾತರ, ಶ್ರೀಸಾಮಾನ್ಯರ ಪರವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ಕಾಲ ಕಳೆಯುತ್ತಿವೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ.ಎಸ್.ಟಿ.ಯನ್ನು ಮರುಪರಿಶೀಲನೆ ಮಾಡುವ ಅನಿವಾರ್ಯತೆ ಇದೆ’ ಎಂದರು.
ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ನಾರಾಯಣ ಮಹಾಲೆ, ಪ್ರಮುಖರಾದ ಪುರುಷೋತ್ತಮ ಸಾವಂತ, ಹರಿಶ್ಚಂದ್ರ ನಾಯ್ಕ, ದಯಾನಂದ ನಾಯ್ಕ ಹಾಗೂ ಖಲೀಲುಲ್ಲಾ ಶೇಖ್ ಇದ್ದರು.