ಮದುವೆಯ ಯೋಗ ಬಂದರೂ, ವಾಂತಿ ಬಂದರೂ ತಡೆಯಲಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಕೆಲವು ವಿಚಿತ್ರ ಘಟನೆಗಳನ್ನು ನೊಡಿದಾಗ ಈ ಮಾತು ನಿಜವೆನಿಸುತ್ತದೆ. ಒಬ್ಬ ಯುವತಿ ಎಲ್ಲರಂತೆ ತಾನೂ ಮದುವೆಯ ಮಂಟಪಕ್ಕೆ ಅತಿಥಿಯಾಗಿ ಬಂದಳು. ಎಲ್ಲರಂತೆ ಅವಳೂ ಸಹ ಕೂತು ಮದುವೆ ಶಾಸ್ತ್ರಗಳನ್ನು ವೀಕ್ಷಿಸುತ್ತಿದ್ದಾಳೆ. ಮದುವೆ ಮುಗಿದನಂತರ ಭೂರಿ ಭೋಜನವನ್ನು ಉಂಡು ಮನೆಗೆ ಹೋಗಿ ಗಡದ್ದಾಗಿ ನಿದ್ದೆ ಮಾಡಬೇಕೆಂದುಕೊಂಡಳು. ಆದರೆ, ಮೇಲೆ ಒಂದು ಗಾದೆಯನ್ನು ಹೇಳಿದ್ದೇವಲ್ಲವೇ? ಅದು ಈಕೆಗೆ ಅನ್ವಯಿಸಿತು. ಏನಾಯಿತೆಂದರೆ…ಮದುವೆ ವೀಕ್ಷಿಸಲು ಬಂದಿದ್ದ ಯುವತಿ ಹಸೆಮಣೆ ಏರಬೇಕಾಯಿತು. ಇಂತಹ ಅಪರೂಪದ ಘಟನೆ ನಡೆದದ್ದು ತಮಿಳುನಾಡು ರಾಜ್ಯದ ತಿರುಚ್ಚಿಯಲ್ಲಿ.
ಘಟನೆಯ ವಿವರ ಹೀಗಿದೆ. ತುರೈಯೂರ್ ನ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ವೆಂಕಟೇಶನ್ ಗೆ ಮನ್ನಸನಲ್ಲೂರ್ ನ ಯುವತಿ ಕನಕ ಳೊಂದಿಗೆ ವಿವಾಹ ನಿಶ್ಚಯವಾಯಿತು. ಮುಹೂರ್ತ ಪ್ರಕಾರ ವಿವಾಹಕ್ಕೆ ಸಕಲ ಸಿದ್ಧತೆಗಳು ನಡೆದವು. ಇನ್ನೇನು ವೆಂಕಟೇಶನ್ ವಧುವಿನ ಕೊರಳಿಗೆ ತಾಳಿ ಬಿಗಿಯಬೇಕು ಎನ್ನುವಷ್ಟರಲ್ಲಿ…ಪೊಲೀಸರ ಪ್ರವೇಶವಾಯಿತು. ಇದ್ಯಾವುದೋ ಹಳೇ ಕಾಲದ ಸಿನಿಮಾ ಕತೆಯಲ್ಲಾ ಸ್ವಾಮಿ. ನಿಜವಾಗಿ ನಡೆದದ್ದು. ವಧು ಮೈನರ್ ಎಂದು ಆ ಮದುವೆ ನಡೆದರೆ ಎಲ್ಲರೂ ಜೈಲು ಪಾಲಾಗುತ್ತಾರೆಂದು ಬಂದ ಪೊಲೀಸರು ಎಚ್ಚರಿಸಿದರು.
ಈ ಮದುವೆ ನಡೆಯಲು ಇಷ್ಟವಿಲ್ಲದವರು ಯಾರೋ ಪಕಡ್ಬಂಧಿಯಾಗಿ ಪೊಲೀಸರಿಗೆ ಸುದ್ದಿ ನೀಡಿರಬೇಕು. ಅವರು ಅಂದುಕೊಂಡ ಹಾಗೆ ಮದುವೆ ನಿಂತು ಹೋಯಿತಾದರೂ… ಈ ಮದುವೆಗೆ ಬಂದ ಯುವತಿಯೊಂದಿಗೆ ಮದುವೆ ಮಾಡಿ ಮುಗಿಸಬೇಕೆಂದುಕೊಂಡರು . ವೆಂಕಟೇಶನ್ ದೂರದ ನೆಂಟನ ಮಗಳನ್ನು ಆಗಿಂದಾಗಲೇ ಮದುಮಗಳನ್ನಾಗಿ ಮಾಡಿ ಮದುವೆ ಮಾಡಿದರು.