ಕಾರವಾರ: ಜಿಲ್ಲೆಯ ಪ್ರಮುಖ ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಕುಣಬಿ, ಕುಂಬ್ರಿ ಮರಾಠಿ, ಗೌಳಿ, ಗೊಂಡ, ಸಿದ್ದಿಗಳ ಬದುಕು ಹಾಗೂ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಹತ್ತಾರು ಸಿಮೆಂಟ್‌ ಶಿಲ್ಪಕಲಾಕೃತಿಗಳು ಇಲ್ಲಿನ ಮಯೂರ ವರ್ಮ ವೇದಿಕೆಯಲ್ಲಿ ಜೀವಕಳೆ ಪಡೆಯುತ್ತಿವೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಅಕ್ಟೋಬರ್‌ 28ರಿಂದ 15 ದಿನಗಳ ರಾಜ್ಯಮಟ್ಟದ ಜನಪರ ಸಿಮೆಂಟ್‌ ಶಿಲ್ಪಕಲಾ ಶಿಬಿರ ಆರಂಭಗೊಂಡಿದ್ದು, ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿರುವ ನುರಿತ ಕಲಾವಿದರು ಶಿಲ್ಪ ಕಲಾಕೃತಿ ರಚನೆಯಲ್ಲಿ ನಿರತರಾಗಿದ್ದಾರೆ.

ಶಿಲ್ಪ ಕಲಾವಿದರು: ಶಿವಮೊಗ್ಗ ಜಿಲ್ಲೆಯ ಬಿ.ಎನ್‌.ಜಯರಾಂ, ಟಿ.ಡಿ. ಜೀವನ್‌, ಎಸ್.ನಾಗರಾಜ್‌, ವಿಜಯಪುರದ ಮುರುಗಯ್ಯ ಜೆ. ಹಿರೇಮಠ, ಉತ್ತರ ಕನ್ನಡದ ಆಂಜನೇಯ ಎ.ವಡ್ಡರ್‌, ರಾಯಚೂರಿನ ದೇವು, ನಾಗರಾಜು. ವೈ, ಜಿ. ಶಿವಕುಮಾರ್‌, ಚಿತ್ರದುರ್ಗದ ವೆಂಕಟೇಶ್‌, ಹಾವೇರಿಯ ಸಿ.ಕೆ.ಮಂಜುನಾಥ, ಶಂಕರ್‌, ದಾವಣಗೆರೆಯ ಈ.ಪಿ. ಹಾಲೇಶ್‌, ವರುಣ.ಎಸ್‌.ಎನ್‌., ಧನಂಜಯ, ಬಾಗಲಕೋಟೆಯ ಜಗದೀಶ, ಬೆಂಗಳೂರಿನ ಎಂ. ಮೋಹನ್, ಚಿಕ್ಕಮಗಳೂರಿನ ಅರುಣ್‌ಕುಮಾರ್‌, ಬೀದರ್‌ನ ಹಣಮಂತ ಎಸ್‌. ಮೀರಗಾಳೆ ಅವರು ಶಿಬಿರದ ನಿರ್ದೇಶಕ ಎಂ. ವೆಂಕಟೇಶ್‌ ಅವರ ಮಾರ್ಗದರ್ಶನದಲ್ಲಿ ಶಿಲ್ಪಗಳನ್ನು ರಚಿಸುತ್ತಿದ್ದಾರೆ. ಬಳ್ಳಾರಿಯ ತಬು ತಬಸ್ಸಂ ಶಿಬಿರದಲ್ಲಿ ಭಾಗಿಯಾದ ಏಕೈಕೆ ಕಲಾವಿದೆಯಾಗಿದ್ದಾರೆ.

RELATED ARTICLES  ಭಟ್ಕಳದಲ್ಲಿ ತಾಲೂಕಾ‌ ಕಸಾಪದಿಂದ ಸಂಸ್ಥಾಪನಾ ದಿನಾಚರಣೆ.

ಶೇ 60ರಷ್ಟು ಪೂರ್ಣ: ‘ಕಳೆದ 9 ದಿನಗಳಿಂದ ಸಿಮೆಂಟ್‌ ಕಲಾಕೃತಿ ರಚನೆಯಲ್ಲಿ ತೊಡಗಿದ್ದೇನೆ. ನಾನು ಗೌಳಿ ಜನಾಂಗವನ್ನು ಪ್ರತಿಬಿಂಬಿಸುವ ವ್ಯಕ್ತಿಯೊಬ್ಬರ ಶಿಲ್ಪವನ್ನು ರಚಿಸುತ್ತಿದ್ದು, ಇದೀಗ ಒಂದು ಹಂತಕ್ಕೆ ತಂದಿದ್ದೇನೆ. ಶಿಬಿರದ ಅವಧಿಯೊಳಗೆ ಶಿಲ್ಪಕ್ಕೆ ಅಂತಿಮ ರೂಪ ನೀಡುವೆ’ ಎನ್ನುತ್ತಾರೆ ಕಲಾವಿದ ನಾಗರಾಜು.

RELATED ARTICLES  ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಸಾಧನೆ.

‘ಜಿಲ್ಲೆಯ ಬುಡಕಟ್ಟು ಜನಾಂಗಗಳು ವೈವಿಧ್ಯತೆಯಿಂದ ಕೂಡಿದ್ದು, ಅವರ ಉಡುಗೆ ತೊಡುಗೆಗಳು ಕೂಡ ವಿಭಿನ್ನವಾಗಿವೆ. ಅವರ ಛಾಯಾಚಿತ್ರಗಳನ್ನು ಜಿಲ್ಲಾಡಳಿತ ಒದಗಿಸಿದ್ದು, ಅದನ್ನು ಆಧರಿಸಿ ನುರಿತ ಕಲಾವಿದರು ಶಿಲ್ಪಗಳನ್ನು ರಚಿಸುತ್ತಿದ್ದಾರೆ. ಶಿಲ್ಪ ರಚನೆಗೆ ಅಗತ್ಯವಾದ ಸಿಮೆಂಟ್‌, ಕಬ್ಬಿಣದ ಸರಳು ಇನ್ನಿತರ ಸಾಮಗ್ರಿಗಳನ್ನು ಒದಗಿಸಿದ್ದೇವೆ. ಜಿಲ್ಲಾಡಳಿತವು ಕಲಾವಿದರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ’ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ಪಿ.ಬಾಬು ಅವರು ತಿಳಿಸಿದರು.