ದೋಷ ಸಾಬೀತಾದರೆ ನ್ಯಾಯಾಧೀಶರು ಸಾಮಾನ್ಯವಾಗಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸುತ್ತಾರೆ. ಆದರೆ ಕೆಲವೊಮ್ಮೆ ವಿಚಿತ್ರವಾದ ನಂಬಲು ಸಾಧ್ಯವಾಗ ದಂಥ ತೀರ್ಪು ನೀಡಿ ಜನರನ್ನು ಚಕಿತಗೊಳಿಸುತ್ತಾರೆ. ಕಳೆದ ವಾರ ಹುವಾಯ್‌ನ ಜಡ್ಜ್ ಒಬ್ಬರು “ನಿನ್ನ ಮಾಜಿ ಪ್ರೇಯಸಿಗೆ ಆಕೆಯ ಬಗ್ಗೆ 144 ಒಳ್ಳೆಯ ವಿಷಯಗಳನ್ನು ಬರೆದು ಕಳುಹಿಸಬೇಕು’ ಎಂದು ತಪ್ಪಿತಸ್ಥನೊಬ್ಬನಿಗೆ ಆದೇಶಿಸಿದ್ದಾರೆ. ಈ ಸಂದೇಶಗಳಲ್ಲಿ ಬಳಕೆಯಾಗುವ ಪದಗಳು ಮತ್ತು ವಿಷಯ ಪುನರಾವರ್ತನೆ ಆಗಬಾರದು ಎಂದೂ ಸೂಚಿಸಿದ್ದಾರೆ.
ಅಷ್ಟಕ್ಕೂ ಆ ಹುಡುಗ ಮಾಡಿದ್ದ ತಪ್ಪೇನೆಂದರೆ, ಆತನಿಗೆ ಫೆಬ್ರವರಿ ತಿಂಗಳಿನಲ್ಲಿಯೇ ಕೋರ್ಟ್, ಮಾಜಿ ಪ್ರೇಯಸಿಯನ್ನು ಇನ್ನು ಮುಂದೆ ಸಂಪರ್ಕಿಸಬಾರದು ಎಂದು ಹೇಳಿತ್ತು. ಈ ತೀರ್ಪನ್ನು ಆತ ಉಲ್ಲಂಘಿಸಿ ಆಕೆಯನ್ನು 144 ಬಾರಿ ಮಸೇಜ್ ಮತ್ತು ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದ. ಕಡೆಗೆ ಈತನಿಗೆ 157 ದಿನಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಬಳಿಕ ಆತನಿಗೆ ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿ ನ್ಯಾಯಾಧೀಶರು ಈ ಶಿಕ್ಷೆ ನೀಡಿದ್ದಾರೆ.