ತುಮಕೂರು: ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ನಡೆದ ಉಪ ಚುನಾವಣೆಯಲ್ಲಿ ನಾನೇ ಕಾರಿನ ಟಯರ್ ನಲ್ಲಿ ಹಣ ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಹೇಳುವ ಮೂಲಕ ಮಂಗಳವಾರ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ನಾರಾಯಣ ಅವರು, ಚಾಮುಂಡೇಶ್ವರಿ ಉಪ ಚುನಾವಣೆ ವೇಳೆ ನಾನು ನನ್ನ ಸ್ಯಾಂಟ್ರೋ ಕಾರಿನ ಟಯರ್‌ನಲ್ಲಿ 4 ಲಕ್ಷ ರುಪಾಯಿ ತೆಗೆದುಕೊಂಡು ಹೋಗಿ ಹಂಚಿದ್ದೇನೆ’ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂದು ನಾನು ಕನಸು ಕಂಡಿದ್ದೆ. ಆ ಕನಸು ನನಸಾಗಿದೆ. ಇನ್ನು ಅವರು ಪ್ರಧಾನಮಂತ್ರಿ ಆಗಬೇಕು ಎಂಬ ಆಸೆ ಇದೆ. ಆದರೆ ಸಿದ್ದರಾಮಯ್ಯ ಪರ ಹೋರಾಟ ಮಾಡಿದ ನನಗೆ ಕಾಂಗ್ರೆಸ್‌ನವರೇ ವಿರೋಧಿಸುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ತಿಪಟೂರಿನಿಂದ ಸ್ಪರ್ಧಿಸಿ ವಿಧಾನಸಭೆಯನ್ನು ಪ್ರವೇಶಿಸುತ್ತೇನೆ ಎಂದು ಬಾಂಬ್ ಸಿಡಿಸಿದರು.
ಕಾಂಗ್ರೆಸ್ ನಾಯಕ ನಾರಾಯಣ ಅವರು ಈ ಹೇಳಿಕೆ ನೀಡುವ ವೇಳೆ ವೇದಿಕೆಯಲ್ಲಿ ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರೂ ವೇದಿಕೆಯಲ್ಲಿದ್ದರು.