ಭುವನೇಶ್ವರ: ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಪ್ರಪ್ರಥಮ ಸಬ್ ಸೂಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ನಿರ್ಭಯ್ ಕೊನೆಗೂ ತನ್ನ ಸೋಲಿನ ಸರಪಳಿಯನ್ನು ಕಳಚಿಕೊಂಡಿದ್ದು, ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಒಡಿಶಾದ ಬಾಲಸೋರ್ ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನ ಮೂರನೇ ಕಾಂಪ್ಲೆಕ್ಸ್ ನಲ್ಲಿ ಮೊಬೈಲ್ ಲಾಂಚರ್ ಮೂಲಕ ನಿರ್ಭಯ್ ಕ್ಷಿಪಣಿಯನ್ನು ಇಂದು ಬೆಳಗ್ಗೆ 11.25ರ ಸಮಯದಲ್ಲಿ ಉಡಾವಣೆ ಮಾಡಲಾಯಿತು. ದಟ್ಟಹೊಗೆಯನ್ನು ಉಗುಳುತ್ತ ರಭಸವಾಗಿ ಗುರಿಯತ್ತ ಮುನ್ನುಗ್ಗಿದ ಕ್ಷಿಪಣಿ, ಪೂರ್ವ ನಿಯೋಜಿತ ಗುರಿಗೆ ಕರಾರುವಕ್ಕಾಗಿ ತಲುಪುವ ಮೂಲಕ ಯಶಸ್ವಿಯಾಗಿದೆ.
ಭಾರತದ ಹೆಮ್ಮೆಯ ಕ್ಷಿಪಣಿ ಬ್ರಹ್ಮೋಸ್ ಗೆ ಪರ್ಯಾಯ ಎಂದೇ ಕರೆಯಲಾಗುತ್ತಿದ್ದ ನಿರ್ಭಯ್ ಕ್ಷಿಪಣಿ ಸಿದ್ಧವಾಗಿ ದಶಕಗಳೇ ಕಳೆದರೂ ಈವರೆಗೆ ನಡೆದ ಎಲ್ಲ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಅದು ವಿಫಲವಾಗಿತ್ತು. ಈ ಹಿಂದೆ ನಡೆದ ಒಟ್ಟು ನಾಲ್ಕು ಪರೀಕ್ಷೆಗಳಲ್ಲಿ ನಿರ್ಭಯ್ ವಿಫಲವಾಗುವ ಮೂಲಕ ವಿಜ್ಞಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು. ಆದರೆ ಕ್ಷಿಪಣಿ ಪ್ರಯೋಗ ವಿಫಲದಿಂದ ದೃತಿಗೆಡದ ನಮ್ಮ ಡಿಆರ್ ಡಿಒ ವಿಜ್ಞಾನಿಗಳು ಮತ್ತೆ ಕ್ಷಿಪಣಿಯನ್ನು ಮತ್ತೆ ಪರೀಕ್ಷೆಗೆ ಸಿದ್ಧಪಡಿಸಿದ್ದರು. ಇದೀಗ ವಿಜ್ಞಾನಿಗಳ ವರ್ಷಗಳ ಶ್ರಮ ಫಲಿಸಿದ್ದು, ಅಂತಿಮವಾಗಿ ನಿರ್ಭಯ್ ಕ್ಷಿಪಣಿ ಯಶಸ್ಸು ಸಾಧಿಸಿದೆ.
ಕೆಳಮಟ್ಟದಲ್ಲಿ ಹಾರುತ್ತಾ ನಿರಂತರ ನಿರ್ದೇಶನ ಪಡೆಯುವ ಕ್ಷಿಪಣಿ ನಿರ್ಭಯ್ ಕ್ಷಿಪಣಿಯು ಸುಮಾರು 750ರಿಂದ 1000 ಕಿ.ಮೀ. ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಕ್ಷಿಪಣಿ ಮಾದರಿಯನ್ನು ನೋಡಿದ್ದ ತಜ್ಞರು ಇದನ್ನು ಆರಂಭದಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಟೊಮ್ಹಾಕ್ ಕ್ಷಿಪಣಿಗೆ ಹೋಲಿಕೆ ಮಾಡಿದ್ದರು. ಎರಡು ಹಂತಗಳ ಈ ಕ್ಷಿಪಣಿ 6 ಮೀಟರ್ ಉದ್ದ, 0.52 ಮೀ. ಸುತ್ತಳತೆ, 2.7 ಮೀಟರ್ ರೆಕ್ಕೆಗಳ ವಿಸ್ತೀರ್ಣದೊಂದಿಗೆ ಒಟ್ಟು 1,500 ಕೆಜಿ ತೂಕ ಹೊಂದಿದೆ. ಈ ಕ್ಷಿಪಣಿಯನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿದ್ದು, ಬಳಿಕ ಈ ಕ್ಷಿಪಣಿಯನ್ನು ಡಿಆರ್‌ಡಿಒದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ಭಾರತದ ಈ ಪ್ರಮುಖ ಮತ್ತು ವಿಧ್ವಂಸಕ ಕ್ಷಿಪಣಿಯನ್ನು ಮೊದಲ ಬಾರಿಗೆ 2013ರ ಮಾರ್ಚ್ 12ರಂದು ಮತ್ತು 2014 ಅಕ್ಟೋಬರ್ 17ರಂದು ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಈ ಎರಡೂ ಪರೀಕ್ಷೆಗಳು ವಿಫಲವಾಗಿದ್ದವು. ನಂತರ ಸುಮಾರು 1 ವರ್ಷಗಳ ಅವಧಿಯಲ್ಲಿ ಮತ್ತೆ ಪ್ರಯೋಗಕ್ಕೆ ಮುಂದಾದ ಡಿಆರ್ ಡಿಒ ಕ್ಷಿಪಣಿಯಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮತ್ತೆ ಮೂರನೇ ಬಾರಿಗೆ ಅಂದರೆ 2015ರ ಅಕ್ಟೋಬರ್ 16ರಂದು ಪರೀಕ್ಷೆ ನಡೆಸಲಾಯಿತು. ಆದರೆ ಆರಂಭಿಕ ಹಂತದಲ್ಲಿ ಕ್ಷಿಪಣಿ ಸರಿಯಾದ ಮಾರ್ಗದಲ್ಲೇ ಚಲಿಸುತ್ತಿತ್ತಾದರೂ, ಹಾರಾಟದ ವೇಳೆ ಕ್ಷಿಪಣಿ ನಿರ್ದೇಶಿತ ಹಾದಿ ಬಿಟ್ಟು ಬೇರೆ ಹಾದಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಈ ಪರೀಕ್ಷೆ ವಿಫಲವಾದ ಕುರಿತು ಸರ್ಕಾರ ವರದಿ ಕೇಳಿತ್ತು. ತನಿಖೆ ನಡೆಸಿ ವರದಿ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್‌ಎಎಲ್) ನಿರ್ದೇಶಕ ಶ್ಯಾಮ್ ಶೆಟ್ಟಿ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಇನ್ನು ಕಳೆದ 2016ರ ಡಿಸೆಂಬರ್ 22ರಂದು ನಡೆದಿದ್ದ ನಾಲ್ಕನೇ ಪರೀಕ್ಷೆಯಲ್ಲೂ ಕ್ಷಿಪಣಿ ವಿಫಲಾವಾಗಿತ್ತು. ಅಂದು ಉಡಾವಣೆಯಾದ ಎರಡೇ ನಿಮಿಷದಲ್ಲಿ ಕ್ಷಿಪಣಿ ಗುರಿ ತಪ್ಪಿತ್ತು. ಹೀಗಾಗಿ ಕ್ಷಿಪಣಿಯನ್ನು ಮಾರ್ಗ ಮಧ್ಯೆಯೇ ನಾಶಪಡಿಸಿ ಅದು ಬಂಗಾಳಕೊಲ್ಲಿಯಲ್ಲಿ ಬೀಳುವಂತೆ ಮಾಡಲಾಯಿತು.
ಇದೀಗ ಅಂತಿಮವಾಗಿ ನಿರ್ಭಯ್ ಕ್ಷಿಪಣಿ ತನ್ನ ಐದನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಸಂಶೋಧಕ ತಂಡದಲ್ಲಿದ್ದ ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.