ಬೆಂಗಳೂರು: ನಿರ್ದೇಶಕ ಸೂರಿಯವರ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಅಭಿನಯಿಸಲು ದೊಡ್ಡ ಅವಕಾಶ ಪಡೆದ ನಟಿ ಮಾನ್ವಿತಾ ಹರೀಶ್ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟಗರು ಮೂಲಕ ಹೊಸ ಪಾತ್ರದೊಂದಿಗೆ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡಿರುವ ಮಾನ್ವಿತಾ ಚಿತ್ರದ ಹಾಡೊಂದರ ಶೂಟಿಂಗ್ ನ್ನು ಗೋವಾದಲ್ಲಿ ಮುಗಿಸಿಕೊಂಡು ಬಂದಿದ್ದಾರೆ.
ತಮ್ಮ ಅನುಭವಗಳನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಹಂಚಿಕೊಂಡ ಮಾನ್ವಿತಾ, ಬೀಚ್ ನಲ್ಲಿ ಬಣ್ಣಬಣ್ಣ ಉಡುಪುಗಳನ್ನು ಧರಿಸಿ ಅಭಿನಯಿಸುವಾಗ ತುಂಬಾ ಉತ್ಸಾಹವಾಯಿತು. ಹಾಡೊಂದಕ್ಕೆ ಬಣ್ಣ ಬಣ್ಣದ ಉಡುಪು ಧರಿಸಿದ ಮಾನ್ವಿತಾರ ಉಡುಪನ್ನು ಎರಿಕಾ ಎಂಬ ರಷ್ಯಾದ 63 ವರ್ಷದ ಮಹಿಳೆ ವಿನ್ಯಾಸಗೊಳಿಸಿದ್ದಾರೆ. ಚರಣ್ ರಾಜ್ ಹಾಡಿಗೆ ಸಂಗೀತ ನೀಡಿದ್ದಾರೆ. ಇದು ಫ್ರೀ ಸ್ಟೈಲ್ ಹಿಪ್ ಹಾಪ್ ಶೈಲಿಯ ಡ್ಯಾನ್ಸ್ ಎಂದರು ಮಾನ್ವಿತಾ.
ಬೀಚ್ ನಲ್ಲಿ ಧರಿಸಿದ ಉಡುಪು ಅವರಿಗೆ ಎಲ್ಲಕ್ಕಿಂತ ಖುಷಿ ನೀಡಿದೆಯಂತೆ. ಹಾಡಿನ ಚಿತ್ರೀಕರಣಕ್ಕೆ ಆರಂಭದಲ್ಲಿ ಗೋವಾದಲ್ಲಿ ಬಟ್ಟೆ ಖರೀದಿಸಲು ನಿಶ್ಚಯಿಸಿದ್ದೆವು. ನಂತರ ಎರಿಕಾ ಅವರ ವಿಶಿಷ್ಟ ಶೈಲಿಯ ಉಡುಪು ಮತ್ತು ಆಭರಣ ಇಷ್ಟವಾಯಿತು ಎನ್ನುತ್ತಾರೆ.
ವಿನ್ಯಾಸಗಾರ್ತಿ ಎರಿಕಾ ಬಗ್ಗೆ ಮಾತನಾಡಿದ ಮಾನ್ವಿತಾ, ಎರಿಕಾ ಅವರು ಕೇವಲ 3 ತಿಂಗಳು ಕೆಲಸ ಮಾಡುತ್ತಾರೆ. ಉಳಿದ ಸಮಯಗಳಲ್ಲಿ ವಿಶ್ವದ ಬೇರೆ ಬೇರೆ ಜಾಗಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ವಿವಿಧ ಹಸ್ತಕೃತಿಗಳು, ವಸ್ತುಗಳು ಮತ್ತು ಆಭರಣಗಳನ್ನು ಸಂಗ್ರಹಿಸಿ ತಮ್ಮ ವಿನ್ಯಾಸಕ್ಕೆ ಬಳಸಿಕೊಳ್ಳುತ್ತಾರೆ ಎನ್ನುತ್ತಾರೆ ನಟಿ ಮಾನ್ವಿತಾ.