ಭಟ್ಕಳ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಅವುಗಳು ತೋಟದಲ್ಲಿನ ಬೆಳೆಗಳನ್ನು ನಾಶಪಡಿಸುತ್ತಿವೆ. ಬೆಳೆಗಳು ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ. ತಾಲ್ಲೂಕಿನ ಮಾರುಕೇರಿ, ಕೋಣಾರ, ಹಾಡುವಳ್ಳಿ, ಕೊಪ್ಪ ಸೇರಿದಂತೆ ಹಲವೆಡೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಂಗಗಳ ಪಾಲಾಗುತ್ತಿವೆ.

ಮಂಗಗಳ ಹಾವಳಿ ಮೊದಲಿನಿಂದ ಇದ್ದರೂ ಸಹ ಈ ವರ್ಷ ಅತಿರೇಕಕ್ಕೆ ಹೋಗಿದೆ. ಬೆಳೆಗಳನ್ನು ರಕ್ಷಿಸಿಕೊಳ್ಳುವುದರ ಜತೆಗೆ ಹಿಂಡು ಹಿಂಡಾಗಿ ಬರುವ ಅವುಗಳನ್ನು ಓಡಿಸುವುದೇ ದಿನನಿತ್ಯದ ಕೆಲಸವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಫಲ ನೀಡದ ತಂತ್ರಗಾರಿಕೆ: ‘ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾವು ನಾನಾ ತರಹದ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ನಾಲ್ಕಾರು ಮನೆಗಳ ಜನರು ಒಟ್ಟಾಗಿ ಮಂಗಗಳನ್ನು ಕಾಡಿಗೆ ಓಡಿಸಿದರೂ ಕೂಡ ಅವು ಮತ್ತೆ ತೋಟಗಳಿಗೆ ನುಗ್ಗುತ್ತಿವೆ. ಮೊದಲೆಲ್ಲಾ ಮಂಗಗಳು ಪಟಾಕಿ ಶಬ್ದಕ್ಕೆ ಓಡಿ ಹೋಗುತ್ತಿತ್ತು. ಆದರೆ ಇದೀಗ ಇದ್ಯಾವ ಶಬ್ದಕ್ಕೂ ಹೆದರುತ್ತಿಲ್ಲ’ ಎನ್ನುತ್ತಾರೆ ಮಾರುಕೇರಿಯ ತೋಟಗಾರಿಕೆ ಬೆಳೆಗಾರ ಕೃಷ್ಣಮೂರ್ತಿ ಹೆಗಡೆ.

RELATED ARTICLES  ಕಿರಿಯರ ವಿಭಾಗದ ಕಬಡ್ಡಿ ವಿಶ್ವಕಪ್‍ಗೆ ಆಯ್ಕೆಯಾದ ಕುಮಟಾ ಬಾಳಿಗಾ ಕಾಲೇಜು ವಿದ್ಯಾರ್ಥಿ

‘ಮಂಗಗಳು ತೋಟಕ್ಕೆ ಒಮ್ಮೆ ಗುಂಪಾಗಿ ಬಂದವೆಂದರೆ ಅಲ್ಲಿದ್ದ ಬಾಳೆಕಾಯಿ, ತೆಂಗಿನಕಾಯಿ, ಸೀಯಾಳ, ಬೇರಹಲಸು ಸೇರಿದಂತೆ ವಿವಿಧ ಬೆಳೆಗಳು ಆಹಾರವಾಗುವುದು ಖಂಡಿತ. ಇತ್ತೀಚಿನ ದಿನಗಳಲ್ಲಿ ಮಂಗಗಳು ಅಡಿಕೆಯನ್ನೂ ಸಹ ತನ್ನ ಆಹಾರವನ್ನಾಗಿಸಿಕೊಂಡಿವೆ’ ಎಂದು ತಿಳಿಸಿದರು.

ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ: ‘ಕಪ್ಪುಮುಖ ಹಾಗೂ ಕೆಂಪುಮುಖದ ಮಂಗಗಳ ಹಾವಳಿ ಬಗ್ಗೆ ರೈತರು ಪ್ರತಿ ವರ್ಷ ಅರಣ್ಯ ಇಲಾಖೆಯ ಗಮನಕ್ಕೆ ತರುತ್ತಿದ್ದರೂ ಅವುಗಳನ್ನು ಓಡಿಸಲು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಗ್ರಾಮ ಸಭೆಯಲ್ಲೂ ಸಹ ರೈತರು ಮಂಗಗಳ ಹಾವಳಿ ನಿಗ್ರಹಿಸುವಂತೆ ಅರಣ್ಯ ಇಲಾಖೆಯವರನ್ನು ಒತ್ತಾಯಿಸಲಾಗಿತ್ತು. ಆದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಕೋಟಖಂಡದ ಬೆಳೆಗಾರ ಲಕ್ಷ್ಮೀ ನಾರಾಯಣ ಹೆಬ್ಬಾರ್ ಆರೋಪಿಸಿದರು.

RELATED ARTICLES  ಪರಶಿವನ ಆರಾದನೆಗೆ ಹರಿದುಬಂದ ಜನಸಾಗರ : ಗೋಕರ್ಣದಲ್ಲಿ ಶಿವರಾತ್ರಿ ವಿಶೇಷ ಪೂಜಾಕೈಂಕರ್ಯಗಳು

‘ಮಂಗಗಳ ಜೊತೆಗೆ ಕ್ಯಾಚಾಳ, ಕಬ್ಬೆಕ್ಕು, ಹಂದಿಗಳ ಕಾಟವೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿದೆ. ನಾವು ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲಾ ಮಂಗ ಸೇರಿದಂತೆ ಕಾಡು ಪ್ರಾಣಿಗಳಿಗೆ ಆಹಾರವಾದರೆ ಜೀವನ ನಡೆಸುವುದಾದರೂ ಹೇಗೆ?’ ಎನ್ನುತ್ತಾರೆ ಅವರು.

ರೈತರಿಗೆ ಮಾಹಿತಿ: ‘ಮಂಗಗಳ ಹಾವಳಿ ನಿಯಂತ್ರಣಕ್ಕೆ ಹಲವು ಮಾರ್ಗಗಳಿವೆ. ಅದರ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುತ್ತದೆ’ ಎಂದು ಸಹಾಯಕ ಅರಣ್ಯ ಅಧಿಕಾರಿ ಬಾಲಚಂದ್ರ ತಿಳಿಸಿದರು.