ಕುಮಟಾ: ಶ್ರೀ ಶಂಭುಲಿಂಗೇಶ್ವರ ಯುವಕ ಸಂಘ ಹೊಸಳ್ಳಿ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಸಮಾಜದ ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಹೊಸಳ್ಳಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಅಧಿಕಾರಾವಧಿಯಲ್ಲಿ ಈ ಭಾಗದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿ ಈ ಹಾಲಕ್ಕಿ ಸಮುದಾಯದವರು ಕೈಗೊಂಡ ಈ ಪಂದ್ಯಾವಳಿ ಮುಂದಿನ ದಿನಗಳಲ್ಲಿ ಇನ್ನೂ ಬೃಹತ್ ಪ್ರಮಾಣದಲ್ಲಿ ಜರುಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಇಂತಹ ಹಿಂದುಳಿದ ಪ್ರದೇಶದಲ್ಲಿ ಹಿಂದುಳಿದವರೇ ಆಯೋಜಿಸಿರುವ ಈ ಕಾರ್ಯಕ್ರಮ ವೈಭವಪೂರಿತವಾಗಿದೆ. ಹಾಲಕ್ಕಿ ಸಮುದಾಯದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಉತ್ತಮ ಕ್ರೀಡಾಪಟುಗಳನ್ನು ಹಳ್ಳಿಯ ಮಟ್ಟದಿಂದ ಗುರುತಿಸಿ ಅವರನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಇಂತಹ ಪಂದ್ಯಾವಳಿಗಳು ಸಹಾಯಕವಾಗಿರುತ್ತವೆ. ಅಲ್ಲದೇ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಕಾಪಾಡುತ್ತದೆ. ಕ್ರೀಡಾ ಮನೋಭಾವದೊಂದಿಗೆ ಆಡಿ ಸೋತಾಗ ಕುಗ್ಗದೇ ಗೆದ್ದಾಗ ಅತಿಯಾಗಿ ಹಿಗ್ಗದೇ ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿರ್ಣಾಯಕರು ಯಾವುದೇ ರೀತಿಯಲ್ಲಿ ತಾರತಮ್ಯ ಮಾಡದೇ ನಿಷ್ಪಕ್ಷಪಾತವಾದ ನಿರ್ಣಯ ನೀಡಬೇಕು. ಕ್ರೀಡಾಪಟುಗಳು ನಿರ್ಣಾಯಕರ ತೀರ್ಪಿಗೆ ಬದ್ಧರಾಗಿ ಅವರ ತೀರ್ಪನ್ನು ಗೌರವಿಸಬೇಕು ಎಂದು ಹೇಳುತ್ತಾ ಶುಭ ಹಾರೈಸಿ ಯಶಸ್ಸನ್ನು ಕೋರಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ.ಸದಸ್ಯ ಗಜಾನನ ಪೈ, ಉದ್ಯಮಿ ಸುಬ್ರಾಯ ವಾಳ್ಕೆ, ಶ್ರೀಮತಿ ಶೋಭಾ ಗೋಪಾಲ ನಾಯ್ಕ, ಗೋಪಾಲ ನಾಯ್ಕ, ಸುಬ್ರಹ್ಮಣ್ಯ ರಾಮಕೃಷ್ಣ ಭಟ್ಟ, ಈಶ್ವರ ಸುಗ್ಗಿ ಗೌಡ, ಗೋಯ್ದು ಕುಪ್ಪು ಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.