ಕಾರವಾರ: ನೋಟು ರದ್ದತಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕರಾಳ ದಿನವನ್ನು ಆಚರಿಸಲಾಯಿತು.ಆದರೆ ಕರಾಳ ದಿನದ ಆಚರಣೆಗೆ ಸ್ಥಳೀಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
೧೧.೩೦ಕ್ಕೆ ಪ್ರಾರಂಭವಾಗಬೇಕಿದ್ದ ಪ್ರತಿಭಟನೆಗೆ ಜನರಿಲ್ಲದೇ ಅರ್ಧ ಗಂಟೆ ವಿಳಂಬವಾಗಿ ಪ್ರಾರಂಭವಾಯಿತು. ಜತೆಗೆ ಶಾಸಕ ಸತೀಶ್ ಸೈಲ್ ಕೂಡ ಕರಾಳ ದಿನಾಚರಣೆ ಆಗಮಿಸಿಲ್ಲ. ಕಳೆದ ವರ್ಷ ಕೇಂದ್ರ ಸರ್ಕಾರವು ಅಮಾನ್ಯೀಕರಣವನ್ನು ಜಾರಿಗೊಳಿಸಿದ ನಂತರ ಸಹಕಾರ ಕ್ಷೇತ್ರದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.
ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿ ಏಕಾಏಕಿ ತೀರ್ಮಾನ ಕೈಗೊಂಡರು. ಇದರಿಂದ ಸಾಮಾನ್ಯ ಜನರು, ರೈತರು, ಎಲ್ಲರೂ ನಷ್ಟಕ್ಕೆ ಒಳಗಾಗಿದ್ದಾರೆ. ಆ ನಷ್ಟವನ್ನು ಭರಿಸುವ ಶಕ್ತಿ ಮೋದಿ ಅವರಿಗೆ ಇದೆಯೇ? ಅವರು ಹೇಳಿದ್ದೂ ಯಾವುದೂ ಆಗಿಲ್ಲ. ಬರೀ ಸುಳ್ಳು ಹೇಳಿದ್ದಾರೆ ಎಂದ ಪ್ರತಿಭಟನಾಕಾರರು ಭ್ರಷ್ಟಾಚಾರವೂ ನಿಂತಿಲ್ಲ. 1,000 ನೋಟು ಕೊಡುವ ಬದಲು 2,000 ಮೌಲ್ಯದ ನೋಟು ಕೊಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ನಕಲಿ ನೋಟು ಮತ್ತೆ ಬಂದಿವೆ ಎಂದು ಆರೋಪಿಸಿದರು.
ಈ ವೇಳೆ ವಕೀಲ ಕೆ.ಆರ್.ದೇಸಾಯಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ, ಕೆಡಿಎ ಅಧ್ಯಕ್ಷ ಸಂದೀಪ ತಳೇಕರ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಇದ್ದರು.