ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತಲೆಯಲ್ಲಿ ಬುದ್ಧಿಯೂ ಇಲ್ಲ, ಹೃದಯದಲ್ಲಿ ಅಂತಃಕರಣವೂ ಇಲ್ಲ. ಇಂತಹ ಪ್ರಧಾನಿಯನ್ನು ಪಡೆದಿದ್ದು ಭಾರತೀಯರ ದುರ್ದೈವ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.

‘ದೊಡ್ಡ ಮುಖಬೆಲೆಯ ನೋಟು ರದ್ದತಿಗೆ ವರ್ಷವಾಯಿತು – ಭಾರತ ನರಳುತ್ತಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ( ಕೆಪಿಸಿಸಿ) ನಗರದ ಆನಂದರಾವ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.

ನಂತರ, ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಗುಂಡೂರಾವ್ ಅವರು, ‘ಈ ಹಿಂದಿನ ಪ್ರಧಾನಿಗಳು ಆಶ್ವಾಸನೆ ಕೊಡುತ್ತಿದ್ದರು. ಕೆಲವು ಈಡೇರುತ್ತಿದ್ದವು. ಕೆಲವು ಆಗುತ್ತಿರಲಿಲ್ಲ. ಆದರೆ ಅವರು ಯಾರೂ ಸುಳ್ಳು ಹೇಳುತ್ತಿರಲಿಲ್ಲ. ಆದರೆ ಜನರ ಕಣ್ಣಲ್ಲಿ ಕಣ್ಣಿಟ್ಟು ಸುಳ್ಳು ಹೇಳಿದ ಪ್ರಧಾನಿ ಇದ್ದರೆ ಅದು ಮೋದಿ ಮಾತ್ರ’ ಎಂದು ಟೀಕಿಸಿದರು.

‘ನೋಟು ರದ್ದತಿ ಘೋಷಿಸಿದಾಗ ₹15.44 ಲಕ್ಷ ಕೋಟಿ ಮೌಲ್ಯದ ನೋಟು ರದ್ದಾಗಿತ್ತು. ಇದರಲ್ಲಿ ಶೇ 90ರಷ್ಟು ನೋಟು ಬ್ಯಾಂಕ್‌ಗೆ ವಾಪಸ್ ಬಂದಿದೆ. ಹಾಗಾದರೆ ಕಪ್ಪು ಹಣ ಎಲ್ಲಿ ಹೋಯಿತು? ಕಪ್ಪು ಹಣ ಬಿಳಿ ಮಾಡುವ ದಂಧೆಕೋರರಿಗೆ ಮಾತ್ರ ಇದರಿಂದ ನೆರವಾಯಿತು. ಇವತ್ತಿಗೂ ಕಪ್ಪುಹಣ ನಿಂತಿಲ್ಲ, ಭಯೋತ್ಪಾದನಾ ಚಟುವಟಿಕೆ ಕಳೆದ ವರ್ಷಕ್ಕಿಂತ ಶೇ 33 ಹೆಚ್ಚಾಗಿದೆ’ ಎಂದು ಗುಂಡೂರಾವ್ ಹೇಳಿದರು.

RELATED ARTICLES  ಯಕ್ಷೋತ್ಸವ ೨೦೨೩ ಸಂಪನ್ನ - ಅಭಿನೇತ್ರಿ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚುಗೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ನೋಟು ರದ್ದು ಮೂಲಕ ಪ್ರಧಾನಿ ಮೋದಿ ಮತ್ತು ಅರುಣ್ ಜೇಟ್ಲಿ ಅವರು ಭಾರತವನ್ನು ಬಡತನಕ್ಕೆ ನೂಕಿದ್ದಾರೆ. 2019ರಲ್ಲೂ ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಬಡತನದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿ ಇರುತ್ತದೆ’ ಎಂದು ಹೇಳಿದರು.

ನಕಾರಾತ್ಮಕ ಪರಿಣಾಮ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ‘ವರ್ಷದ ಹಿಂದೆ ನೋಟು ರದ್ದು ಮಾಡಲಾಯಿತು. ಆ ನಂತರ ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಸುಮಾರು 150 ಜನ ಮೃತಪಟ್ಟಿದ್ದಾರೆ. ನೋಟು ರದ್ದು ಕೇವಲ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಇದು ಕಪ್ಪುಹಣದ ವಿರುದ್ಧ ನಿರ್ದಿಷ್ಟ ದಾಳಿ ಎಂದು ಹೇಳಿದರು. ಇದರಿಂದ ಆರ್ಥಿಕ ಉತ್ತೇಜನ ಆಗಲಿದೆ, ಹಣಕಾಸು ವ್ಯವಸ್ಥೆ ಶುದ್ಧ ವಾಗುತ್ತದೆ ಎಂದು ಬಣ್ಣಿಸಿದರು. ಆದರೆ ಇದು ಸಂಪೂರ್ಣ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. 10,000ಕ್ಕೂ ಅಧಿಕ ಕಂಪೆನಿಗಳು ಮುಚ್ಚಿವೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಜಿಡಿಪಿ ತೀವ್ರವಾಗಿ ಕುಸಿದಿದೆ’ ಎಂದು ಹೇಳಿದರು.

RELATED ARTICLES  ಐವರು ಹಿರಿಯ ಕಲಾವಿದರಿಗೆ ಮಹಾಬಲ ಪ್ರಶಸ್ತಿ ಪ್ರದಾನ : ಎಲ್ಲರ ‌ಮನೆಗಳೂ ಸಂಸ್ಕಾರದ ಮನೆಯಾಗಲಿ: ರಾಘವೇಶ್ವರ ಭಾರತೀ ಸ್ವಾಮೀಜಿ

ನೋಟು ರದ್ದು ಸಂಘಟಿತ ಲೂಟಿ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ. ಅದು ಅಕ್ಷರಶಃ ನಿಜ. ನೋಟು ರದ್ದು ಮಾಡಿ ಜನ ಸಂಕಷ್ಟ ಅನುಭವಿಸುತ್ತಿದ್ದರೆ ಬಿಜೆಪಿಯವರು ಸಂಭ್ರಮ ಆಚರಿಸುತ್ತಿದ್ದಾರೆ ಎಂದು ಆರೋಪಿಸಿದರು.

ನೋಟು ರದ್ದು ಪರಿಣಾಮ ಕುರಿತು ಶ್ವೇತಪತ್ರ ಹೊರಡಿಸಲು, ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧರಿದ್ದೀರಾ ಎಂದು ಅವರು ಪ್ರಶ್ನಿಸಿದರು.

ಗುಜರಾತ್ ಚುನಾವಣೆ ನಡೆಯುತ್ತಿರುವುದರಿಂದ ಚಳಿಗಾಲದ ಅಧಿವೇಶನದಲ್ಲಿ ಜಿಎಸ್‌ಟಿ ಮತ್ತು ನೋಟು ರದ್ದು ಬಗ್ಗೆ ಚರ್ಚಿಸಲು ಸಿದ್ಧರಿಲ್ಲ. ಪ್ರಧಾನಿ ಮೋದಿ ಜನ ಸಾಮಾನ್ಯರ ಕ್ಷಮೆ ಕೇಳಬೇಕು ಎಂದು ವೇಣುಗೋಪಾಲ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.