ಶಿರಸಿ: ಸಹಕಾರಿ ಸಂಘದ ಮೂಲದ ಬೆಳೆ ವಿಮೆ ಹಣ ತುಂಬಿರುವ ರೈತರು ವಿಮಾ ಪರಿಹಾರ ಮೊತ್ತದಿಂದ ವಂಚಿತರಾಗಿದ್ದಾರೆ. ಪರಿಹಾರ ಸಿಗದ ರೈತರಿಗೆ ವಿಮಾ ಕಂಪೆನಿಗಳು ನೆರವಾಗಬೇಕು ಎಂದು ತಾಲ್ಲೂಕಿನ ಕೊರ್ಲಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ರೈತರು ಮಂಗಳವಾರ ಇಲ್ಲಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತರು ಪಡೆದ ಸಾಲಕ್ಕೆ ಅನುಗುಣವಾಗಿ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿಯಲ್ಲಿ ಸಹಕಾರಿ ಸಂಘಗಳಲ್ಲಿ ವಿಮೆ ಕಂತಿನ ಮೊತ್ತ ತುಂಬಿದ್ದಾರೆ. ಕೆಡಿಸಿಸಿ ಬ್ಯಾಂಕಿನಲ್ಲಿ 2017ನೇ ಆಗಸ್ಟ್‌ನಲ್ಲಿ ಖಾತೆ ಹೊಂದಿದ ಕೆಲವು ಸದಸ್ಯರಿಗೆ ಮಾತ್ರ ವಿಮಾ ಹಣ ಜಮಾ ಆಗಿದೆ. ಇನ್ನೂ ಕೆಲವು ಸದಸ್ಯರಿಗೆ ಬೆಳೆವಿಮೆ ಜಮಾ ಆಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೊರ್ಲಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರವಿ ನಾಯ್ಕ ಕಲಕರಡಿ ಮಾತನಾಡಿ, ‘ಸಂಘದ ವ್ಯಾಪ್ತಿಯ 120ರಿಂದ 150 ಜನ ರೈತರು ಬೆಳೆ ವಿಮಾ ಪರಿಹಾರದಿಂದ ವಂಚಿತರಾಗಿದ್ದಾರೆ. ಕಳೆದ ವರ್ಷ ಬೆಳೆದ ಬೆಳೆ ಕೈಗೆ ಸಿಗದೇ ರೈತರು ತುಂಬಾ ತೊಂದರೆಯಲ್ಲಿದ್ದಾರೆ. ಸೊಸೈಟಿಗೆ ಬಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪರಿಹಾರ ವಂಚಿತ ರೈತ ಸದಸ್ಯರ ಖಾತೆಗೆ ಕೂಡಲೇ ಜಮಾ ಮಾಡಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಸಹದೇವ ನಾಯ್ಕ, ಆಡಳಿತ ಮಂಡಳಿ ಸದಸ್ಯರಾದ ಪಿ.ಟಿ.ನಾಯ್ಕ ಕಂಡ್ರಾಜಿ, ಲೋಕೇಶ ನಾಯ್ಕ, ಸುಜಾತಾ ನಾಯ್ಕ, ಪ್ರೇಮಾ ಗೌಡ, ಪದ್ಮನಾಭ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ ನಾಯ್ಕ, ಪ್ರಮುಖರಾದ ನೆಹರೂ ನಾಯ್ಕ, ಕರಿಯಾ ಗೌಡ, ಮಂಜಪ್ಪ ನಾಯ್ಕ, ಮಹೇಶ ಕೆಎಂ, ಶ್ರೀಪಾದ ನಾಯ್ಕ ಇದ್ದರು.