ಸಿದ್ದಾಪುರ: ‘ಹೊಸದಾಗಿ ಅಳವಡಿಸಲಾಗಿರುವ ಪಡಿತರ ವ್ಯವಸ್ಥೆಯಿಂದ ಸಮಸ್ಯೆ ಉಂಟಾಗಿದ್ದು, ಹಳೆಯ ಪದ್ಧತಿಯಲ್ಲಿಯೇ ಪಡಿತರ ವಿತರಣೆ ಮಾಡುವುದು ಒಳ್ಳೆಯದು’ ಎಂದು ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರು ಒತ್ತಾಯಿಸಿದರು.
‘ಈ ಬಾರಿ ಎಲ್ಲೆಲ್ಲಿ ಪಡಿತರ ಜನರಿಗೆ ಸಿಕ್ಕಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಆಹಾರ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು.
‘ಪಡಿತರ ಪಡೆಯಲು ಕಂಪ್ಯೂಟರ್‌ನಲ್ಲಿ ಪಡಿತರ ಚೀಟಿದಾರರು ಹೆಬ್ಬೆರಳು ಇಟ್ಟರೂ ಅದು ತೆಗೆದುಕೊಳ್ಳುವುದಿಲ್ಲ’ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಪಡಿತರ ವ್ಯವಸ್ಥೆಯ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ’ ಎಂದು ಸದಸ್ಯ ವಿವೇಕ ಭಟ್ಟ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಅಧಿಕಾರಿ ಎನ್.ಐ.ಗೌಡ, ‘ತಾಲ್ಲೂಕಿನಲ್ಲಿ ನೆಟ್‌ವರ್ಕ್ ಇರುವ ಪಡಿತರ ಅಂಗಡಿಗಳ(ಸಹಕಾರಿ ಸಂಘಗಳು) ಮಾಹಿತಿಯನ್ನು ಕೇಳಿದ್ದರು. ಅದರಂತೆ ನಾವು 18 ಸಹಕಾರಿ ಸಂಘಗಳ ಹೆಸರು ನೀಡಿದ್ದೇವೆ. ಅಲ್ಲಿ ಹೊಸ ಪದ್ಧತಿ ಅಳವಡಿಸಲಾಗಿದೆ’ ಎಂದರು. ‘ಬಿಎಸ್‌ಎನ್‌ಎಲ್ ನೆಟವರ್ಕ್ ಸರಿ ಇಲ್ಲ. ಟವರ್ ಇದ್ದರೂ ಸಿಗ್ನಲ್ ಸಿಗುವುದಿಲ್ಲ’ ಎಂದು ಸುಧೀರ್ ಗೌಡರ್ ಹೇಳಿದರು.
‘ಈ ವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಸಹಕಾರಿ ಸಂಘದ ಪದಾಧಿಕಾರಿಗಳು ಮನವಿ ನೀಡಿದ್ದಾರೆ. ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದೇವೆ’ ಎಂದು ಎನ್.ಐ.ಗೌಡ ಹೇಳಿದರು. ‘ಸ್ಥಳೀಯ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗಳಿಗೆ ಶನಿವಾರ ಮತ್ತು ಭಾನುವಾರ ಬರಬೇಡಿ ಎಂದು ಹೇಳುತ್ತಾರೆ’ ಎಂದು ಸದಸ್ಯ ನಾಸೀರ್ ಖಾನ್ ಆರೋಗ್ಯ ಇಲಾಖೆಯ ಚರ್ಚೆಯ ಸಂದರ್ಭದಲ್ಲಿ ಹೇಳಿದರು.‘ತಾಲ್ಲೂಕು ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರತಿ ಸಭೆಯಲ್ಲಿಯೂ ಹೇಳುತ್ತಲೇ ಬಂದಿದ್ದೇವೆ’ ಎಂದರು.
‘ತಾಲ್ಲೂಕು ಆಸ್ಪತ್ರೆಯಲ್ಲಿ ಮುಂದೆ ಇಂತಹ ಸ್ಥಿತಿ ಬರದಂತೆ ನೋಡಿಕೊಳ್ಳಿ’ ಎಂದು ಸುಧೀರ್ ಗೌಡರ್, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಅವರಿಗೆ ಸೂಚನೆ ನೀಡಿದರು. ‘ಸಿದ್ದಾಪುರದಿಂದ ಕಾರವಾರಕ್ಕೆ ಮತ್ತು ಮಂಗಳೂರು ಆಸ್ಪತ್ರೆಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಈ ಹಿಂದೆ ಸಭೆಯಲ್ಲಿ ಕೇಳಿದ್ದೆ’ ನಾಸೀರ್ ಖಾನ್ ಹೇಳಿದರು. ‘ಒಂದೇ ಬಸ್ ಓಡಾಡುವ ಕಡೆ ಅದನ್ನೂ ರದ್ದು ಮಾಡಿದರೆ ಹೇಗೆ ?’ ಎಂದು ಮಹಾಬಲೇಶ್ವರ ಹೆಗಡೆ, ಸಾರಿಗೆ ಇಲಾಖೆಯ ಅಧಿಕಾರಿ ರವೀಂದ್ರ ಅವರಿಗೆ ಪ್ರಶ್ನೆ ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹಾಗೂ ಇಒ ಶ್ರೀಧರ ಭಟ್ ಇದ್ದರು.