ಬೆಂಗಳೂರು: ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟ ಶಿವರಾಜ್ ಕುಮಾರ್ ಎಂದರೆ ತಪ್ಪಾಗಲಾರದು. ನಿರ್ದೇಶಕರು ಮತ್ತು ನಿರ್ಮಾಪಕರು ಅವರ ಜೊತೆ ಕೆಲಸ ಮಾಡಲು ಕಾಯುತ್ತಿದ್ದಾರೆ. ಇದೀಗ ಶಿವರಾಜ್ ಕುಮಾರ್ ಅವರು ಮುಗುಳು ನಗೆ ನಿರ್ದೇಶಕ ಯೋಗರಾಜ್ ಭಟ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರ, ವಿಶೇಷ ನಿರೂಪಣೆ ಪಾತ್ರ ಮತ್ತು ಸನ್ನಿವೇಶವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳಿಗೆ ಖುಷಿಯನ್ನುಂಟುಮಾಡಲಿದೆ. ಯುವ ನಟರಾದ ಇಶಾನ್ ಮತ್ತು ಪ್ರದೀಪ್ ಅವರಿಗಾಗಿ ಚಿತ್ರಕಥೆ ಬರೆಯುತ್ತಿದ್ದ ಯೋಗರಾಜ ಭಟ್ಟರು ಇದೀಗ ಅದೆಲ್ಲವನ್ನೂ ಬದಿಗೆ ಇರಿಸಿ ಶಿವಣ್ಣ ಅವರಿಗೆ ಕಥೆ ಬರೆಯುತ್ತಿದ್ದಾರಂತೆ. ಆಕ್ಷನ್ ಥ್ರಿಲ್ಲರ್ ಆಗಿರುವ ಚಿತ್ರದ ಕಥೆಯ ಒಂದು ಸಾಲನ್ನು ಈಗಾಗಲೇ ನಿರ್ದೇಶಕರು ಶಿವಣ್ಣನಿಗೆ ವಿವರಿಸಿದ್ದು, ಅವರಿಗೂ ಇಷ್ಟವಾಗಿದೆಯಂತೆ.
ಈ ಮಧ್ಯೆ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರಂತೆ. ಅವರಲ್ಲಿ ಯಾರನ್ನು ಆಯ್ಕೆ ಮಾಡುವುದೆಂದು ಶಿವಣ್ಣ ಮತ್ತು ಭಟ್ಟರಿಗೆ ಬಿಟ್ಟ ವಿಚಾರವಾಗಿದೆ.