ಹೊನ್ನಾವರ : ರಾಷ್ಟ್ರೀಯ ಕಾನೂನು ದಿನಾಚರಣೆಯ ಅಂಗವಾಗಿ ತಾಲೂಕಾ ಕಾನೂನು ಸೇವಾ ಸಮಿತಿ ಹೊನ್ನಾವರ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕಾ ಪಂಚಾಯತ್, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಂದು ಶಾಲಾ ವಿದ್ಯಾರ್ಥಿಗಳೊಂದಿಗೆ ಜಾತಾ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಎಂ. ವೀ.ಚನ್ನಕೇಶವ ರೆಡ್ಡಿ ಸೇರಿದಂತೆ ಕಾನೂನು ಸೇವಾ ಸಮಿತಿಯ ಸದಸ್ಯರು ವಕೀಲರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಇಂದು ಶಿಕ್ಷಣದ ಕೊರತೆಯಿಂದಾಗಿ ಬಹಳಷ್ಟು ಜನರು ಕಾನೂನಿನ ತಿಳಿವಳಿಕೆ ಹೊಂದಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸುವ ಉದ್ದೇಶದಿಂದ 1987 ರಲ್ಲಿ ಕಾನೂನು ಸೇವಾ ಅಧಿನಿಯಮ ರಾಷ್ಟ್ರದಲ್ಲಿ, 1995ರಲ್ಲಿ ರಾಜ್ಯದಲ್ಲಿ ಜಾರಿಗೊಂಡಿದೆ. ಇದರಡಿ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸೇವಾ ಪ್ರಾಧಿಕಾರ, ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಕಾನೂನಿನ ಬಗ್ಗೆ ವ್ಯಾಪಕವಾದ ಪ್ರಚಾರ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಮಿತಿ ನಿರತವಾಗಿದೆ. ಗ್ರಾಮಸ್ಥರೊಂದಿಗೆ ಶಾಲೆ ವಿದ್ಯಾರ್ಥಿಗಳಿಗೂ ಸಹ ಕಾನೂನಿನ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ. ಜೀವನದ ಪ್ರತಿ ಚಟುವಟಿಕೆಯೂ ಕಾನೂನಿನ ಚೌಕಟ್ಟಿಗೆ ಒಳಪಟ್ಟಿದ್ದು, ಸೂಕ್ತವಾಗಿ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಂಡಲ್ಲಿ ಮಾತ್ರ ಅರ್ಥಪೂರ್ಣವಾದ ಜೀವನ ಸಾಗಿಸಬಹುದಾಗಿದೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಲೋಕ ಅದಾಲತ್, ಮಧ್ಯಸ್ಥಿಕೆ, ರಾಜಿ ಸಂಧಾನದ ಮೂಲಕ ಪರಸ್ಪರ ಒಪ್ಪಂದದಿಂದ ಪರಿಹರಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾನೂನಿನ ಅಂಶಗಳ ಬಗ್ಗೆ ಅಜ್ಞಾನ ಕ್ಷಮಾರ್ಹವಲ್ಲ ಎಂಬುದನ್ನು ಅರಿಯಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕು, ಕರ್ತವ್ಯಗಳೊಂದಿಗೆ ಕಾನೂನಿನ ಬಗ್ಗೆ ತಿಳಿದುಕೊಂಡು ಪಾಲನೆ ಮಾಡಿದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಸಾರ್ಥಕಗೊಳ್ಳಲಿವೆ. ಕಾನೂನನ್ನು ಗೌರವಿಸುವುದರಿಂದ ಮಾತ್ರ ಸುವ್ಯವಸ್ಥಿತವಾದ ಸ್ವಸ್ಥ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.