ಕಾರವಾರ:ವಿದ್ಯಾರ್ಥಿ ಜೀವನದಿಂದಲೇ ಕಾನೂನಿನ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರೌಢಶಾಲೆ ವಿಭಾಗದ ಪಠ್ಯ– ಪುಸ್ತಕದಲ್ಲಿ ಕಾನೂನು ಪಾಠಗಳನ್ನು ಅಳವಡಿಸಬೇಕು’ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಹೇಳಿದರು.
ದಶದಿನದ ಕಾನೂನು ಸೇವೆಗಳ ಅಭಿನಾಯದ ಮೊದಲೇ ದಿನದ ಕಾರ್ಯಕ್ರಗಳನ್ನು ಇಲ್ಲಿನ ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ಕಿರಿಯ ವಯಸ್ಸಿನಿಂದಲೇ ಕಾನೂನಿನ ಕುರಿತು ತಿಳುವಳಿಕೆ ಹೊಂದುವುದು ಅವಶ್ಯಕ. ಅದರಿಂದ ಕಾನೂನು ಬಾಹಿರ ಚಟುವಟಿಕೆಗಳು ಕಡಿಮೆಯಾಗುತ್ತದೆ’ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ‘ಚಿಕ್ಕ ವಯಸ್ಸಿನಲ್ಲಿ ಕಲಿಯುವಲ್ಲಿ, ಕೆಲವು ಅಗತ್ಯ ವಿಷಯಗಳನ್ನು ಅರಿತುಕೊಳ್ಳುವಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅದನ್ನು ಬಿಟ್ಟು ಉಪಯೋಗವಿಲ್ಲದ ಇತರ ಬಾಹ್ಯ ಚಟುವಟಿಕೆಗಳಿಂದ ದೂರ ಇರಬೇಕು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಕಾನೂನು ಸೇವೆಗಳ ದಿನಾಚರಣೆಯ ಮಹತ್ವ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸೇಂಟ್ ಮೈಕೆಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯಧ್ಯಾಪಕಿ ಸಿಸ್ಟರ್ ಮರ್ಸಿ ಜಾರ್ಜ್, ವಕೀಲೆ ಸಂಧ್ಯಾ ತಳೇಕರ್ ಇದ್ದರು.