ಬೆಂಗಳೂರು: ಕಲ್ಲಿದ್ದಲು ಕೊರತೆ ಮತ್ತು ಶಾಖೋತ್ಪನ್ನ ಘಟಕಗಳಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಮೂರು ದಿನಗಳಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಮಿತವಾಗಿ ವಿದ್ಯುತ್‌ ಬಳಸುವಂತೆ ಇಂಧನ ಇಲಾಖೆ ಮನವಿ ಮಾಡಿದೆ.

‘ಶಾಖೋತ್ಪನ್ನ ಘಟಕಗಳು ತೀವ್ರ ಕಲ್ಲಿದ್ದಲು ಕೊರತೆ ಎದುರಿಸುತ್ತಿರುವುದರಿಂದ ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ್ ತಿಳಿಸಿದರು.

‘ಬಳ್ಳಾರಿ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ತಲಾ ಒಂದೊಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿವೆ. ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ಎಲ್ಲ ಘಟಕಗಳೂ ಕಾರ್ಯನಿರ್ವಹಿಸುತ್ತಿವೆ’ ಎಂದು ಅವರು ವಿವರಿಸಿದರು.

‘ರಾಜ್ಯಕ್ಕೆ ಪ್ರತಿ ದಿನ ಪೂರೈಕೆ ಆಗುವ ಕಲ್ಲಿದ್ದಲನ್ನು ನೇರವಾಗಿ ವಿದ್ಯುತ್‌ ಉತ್ಪಾದನೆಗೆ ಬಳಸುತ್ತಿದ್ದೇವೆ. ಸದ್ಯಕ್ಕೆ ನಮ್ಮಲ್ಲಿ ಕಲ್ಲಿದ್ದಲು ಸಂಗ್ರಹ ಇಲ್ಲದಿರುವುದರಿಂದ ಒಂದು ದಿನ ಪೂರೈಕೆ ಆಗದಿದ್ದರೂ ದೊಡ್ಡ ಸಮಸ್ಯೆ ಉಂಟಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

RELATED ARTICLES  2ಜಿ ಹಗರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ.

‘ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಘಟಕದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಪರಿಹರಿಸಲು ಇನ್ನೂ ಕೆಲವು ದಿನ ಹಿಡಿಯಬಹುದು. ಅಲ್ಲಿಯವರೆಗೆ ಅಲ್ಲಿ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸಲಿದೆ. ಸದ್ಯ ರೈತರ ಪಂಪ್‌ ಸೆಟ್‌ಗಳು ಕಾರ್ಯನಿರ್ವಹಿಸದಿರುವುದು ಮತ್ತು ತಲಾ 600 ಮೆಗಾ ವಾಟ್‌ ಸೋಲಾರ್‌ ಮತ್ತು ಪವನ ವಿದ್ಯುತ್‌ ಲಭ್ಯವಿರುವುದು ಸಮಾಧಾನದ ಸಂಗತಿ’ ಎಂದೂ ಕುಮಾರ ನಾಯಕ್‌ ತಿಳಿಸಿದರು.

ರಾಜ್ಯಕ್ಕೆ ನಿತ್ಯ 30 ಸಾವಿರ ಟನ್‌ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ರಾಜ್ಯದ ಎಲ್ಲ ವಿದ್ಯುತ್‌ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಪ್ರತಿನಿತ್ಯ 10,536 ಮೆಗಾವಾಟ್‌ ಉತ್ಪಾದನೆ ಆಗುತ್ತದೆ. ಆದರೆ, ನ. 8ರ ಸಂಜೆ 4 ಗಂಟೆವರೆಗೆ 4,021 ಮೆಗಾ ವಾಟ್‌ ವಿದ್ಯುತ್‌ ಮಾತ್ರ ಉತ್ಪಾದನೆ ಆಗಿದೆ ಎಂದು ಅವರು ನುಡಿದರು.

RELATED ARTICLES  ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು:ಮಠದಲ್ಲಿ ಬಿಗಿ ಭದ್ರತೆ: ದೌಡಾಯಿಸುತ್ತಿರುವ ಗಣ್ಯರ ದಂಡು.

‘ಕೇಂದ್ರ ಗ್ರಿಡ್‌ನಿಂದ ರಾಜ್ಯ 2,531 ಮೆಗಾ ವಾಟ್‌ ವಿದ್ಯುತ್‌ ಪಡೆಯುತ್ತಿದೆ. ಅಸಂಪ್ರದಾಯಿಕ ವಿದ್ಯುತ್‌ ಮೂಲಗಳಿಂದ 870 ಮೆಗಾ ವಾಟ್‌ ವಿದ್ಯುತ್‌ ಲಭ್ಯವಿದೆ. ಬೇಡಿಕೆ ಈಡೇರಿಸಲು ಭಾರತೀಯ ಇಂಧನ ವಿನಿಮಯದಿಂದ ಬೆಸ್ಕಾಂ (ಬೆಂಗಳೂರು ವಿದ್ಯುತ್‌ ಪೂರೈಕೆ ನಿಗಮ) ಮಂಗಳವಾರ‌ ಅಗತ್ಯವಾದ 500 ಮೆಗಾವಾಟ್‌ ವಿದ್ಯುತ್‌ ಖರೀದಿಸಿದೆ. ಇದರ ಜೊತೆಗೆ, 350 ಮೆಗಾವಾಟ್‌ ಅನ್ನು ಹೆಚ್ಚುವರಿಯಾಗಿ ಖರೀದಿ ಮಾಡಲಾಗಿದೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ನೀತಿ ಅನ್ವಯ, ‌ಬೇಸಿಗೆ ದಿನಗಳ ಅಗತ್ಯಕ್ಕಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಜಲ ವಿದ್ಯುತ್‌ ಸ್ಥಾವರಗಳಲ್ಲಿ ಸಾಮರ್ಥ್ಯಕ್ಕಿಂತಲೂ ಕಡಿಮೆ ಉತ್ಪಾದನೆ ಮಾಡಲಾಗುತ್ತಿದೆ’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ತಿಳಿಸಿದರು.