ವಾಷಿಂಗ್ಟನ್: ಆಗ್ನೇಯ ಏಷ್ಯಾ ಭಾಗದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗ ಮಲೇರಿಯಾ ಸದ್ದಿಲ್ಲದೇ ಹಬ್ಬುತ್ತಿದ್ದು, ವಿಶೇಷವೆಂದರೆ ಈ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬ್ಯಾಂಕಾಕ್ ನಲ್ಲಿರುವ ಆಕ್ಸ್ ಫರ್ಡ್ ಟ್ರಾಪಿಕಲ್ ಮೆಡಿಸಿನ್ ವಿಭಾಗದ ವೈದ್ಯರು ಈ ಸೂಪರ್ ಮಲೇರಿಯಾದ ಕುರಿತು ಮಾಹಿತಿ ಕಲೆಹಾಕಿದ್ದಲ್ಲದೇ, ಈ ರೋಗದ ಬಗ್ಗೆ ಸಂಶೋಧನೆ ಕೂಡ ಆರಂಭಿಸಿದ್ದಾರೆ. ಈ ತಂಡ ಹೇಳುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಲೇರಿಯಾ ವಿಶ್ವದಲ್ಲಿಯ ಅತ್ಯಂತ ಸಾಮಾನ್ಯ ಸೋಂಕು ರೋಗವಾಗಿದೆ. ಆದರೆ ಪ್ರಸ್ತುತ ದಕ್ಷಿಣ ಮತ್ತು ಆಗ್ಮೇಯಾ ಏಷ್ಯಾದಲ್ಲಿ ಪತ್ತೆಯಾಗಿರುವ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ಹೇಳಿದೆ.
ಈ ಮಾರಣಾಂತಿಕ ರೋಗ ಆರಂಭದಲ್ಲಿ ಆಗ್ನೇಯ ಏಷ್ಯಾದಲ್ಲಿ ಕಾಣಿಸಿಕೊಂಡಿತ್ತಾದರೂ ಕ್ರಮೇಣ ದಕ್ಷಿಣ ಏಷ್ಯಾಗೂ ವೇಗವಾಗಿ ಹರಡುತ್ತಿದೆ. ಮೊದಲು ಕಾಂಬೋಡಿಯಾದಲ್ಲಿ ಕಾಣಿಸಿಕೊಂಡ ಸೂಪರ್ ಮಲೇರಿಯಾ ಬಳಿಕ ಥಾಯ್ ಲ್ಯಾಂಡ್, ಲಾವೋಸ್ ಮತ್ತು ದಕ್ಷಿಣ ವಿಯೆಟ್ನಾಂ ವರೆಗೂ ಪಸರಿಸಿದೆ. ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಈ ಮಾರಣಾಂತಿಕ ರೋಗ ಭಾರತಕ್ಕೂ ಕಾಲಿರಿಸಬಹುದಾದ ದಿನಗಳು ದೂರವಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

RELATED ARTICLES  ಬಹು ಉಪಯೋಗಿ ಕಹಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ !

ಸೂಪರ್ ಮಲೇರಿಯಾ ಬಗ್ಗೆ ಈ ಹಿಂದೆ ದಿ ಲ್ಯಾಂಸೆಟ್ ಇನ್ ಫೆಕ್ಷಿಯಸ್ ಡೀಸಸ್ ಎಂಬ ಸಂಶೋಧಕ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತಾದರೂ ಈ ಬಗ್ಗೆ ಹೆಚ್ಚಾಗಿ ಸುದ್ದಿಯಾಗಿರಲಿಲ್ಲ. ಬಳಿಕ ಈ ಸೋಂಕು ವೇಗವಾಗಿ ಹಬ್ಬುತ್ತಿದ್ದಂತೆಯೇ ಇದೀಗ ಈ ಸೂಪರ್ ಮಲೇರಿಯಾ ವಿಶ್ವದ ಗಮನ ಸೆಳೆದಿದೆ.

ವಿಶ್ವಾದ್ಯಂತ ಈಗಲೂ ಪ್ರತಿ ವರ್ಷ ಸುಮಾರು 21.2 ಕೋಟಿ ಮಂದಿ ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದು, ಈಪೈಕಿ 4.20 ಲಕ್ಷಕ್ಕೂ ಅಧಿಕ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಮಲೇರಿಯಾ ರೋಗ ಸೊಳ್ಳೆಗಳಿಂದ ಹರಡುತ್ತದೆ. ಹೀಗಾಗಿ ಸೊಳ್ಳೆ ಕಾಟದಿಂದ ಮುಕ್ತರಾದರೆ ಈ ಮಾರಕ ಸೂಪರ್ ಮಲೇರಿಯಾ ರೋಗದಿಂದಲೂ ಮುಕ್ತರಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES  ಅಶ್ವತ್ಥ ಮರದ ಎಲೆಗಳಲ್ಲಿದೆ ಹಲವು ರೋಗ ನಿವಾರಕ ಶಕ್ತಿ.

ಮನೆಗಳಿಗೆ ಸೊಳ್ಳೆ ಪರದೆ ಕಟ್ಟುವುದು, ನೀರು ನಿಲ್ಲದಂತೆ ನಿಂತನೀರನ್ನು ಸ್ವಚ್ಛಗೊಳಿಸುವುದು, ಸೊಳ್ಳೆಗಳು ಪ್ರವೇಶ ಮಾಡದಂತೆ ಮನೆಗಳಲ್ಲಿ ಸೊಳ್ಳೆ ನಿಯಂತ್ರಕಗಳನ್ನು ಬಳಕೆ ಮಾಡುವುದು ಉತ್ತಮ. ಇದರ ಹೊರತಾಗಿಯೂ ಜ್ವರ ಕಾಣಿಸಿಕೊಂಡರೆ ನೀವು ಮಲೇರಿಯಾಕ್ಕೆ ತುತ್ತಾಗುವ ಅಪಾಯವಿರುತ್ತದೆ. ಹೀಗಾಗಿ ಜ್ವರವಿದ್ದಷ್ಟು ಕಾಲವೂ ನಿಮ್ಮ ವೈದ್ಯರು ನೀಡುವ ಮಾತ್ರೆಗಳನ್ನು ಸೇವಿಸುತ್ತಿರಬೇಕು. ಒಂದು ವೇಳೆ ತೀವ್ರ ಜ್ವರ, ಮೈ ನಡುಗಿಸುವ ಚಳಿ, ಅತಿಯಾಗಿ ಬೆವರುವಿಕೆ, ತಲೆನೋವು, ವಾಂತಿ, ಅತಿಸಾರ ಇತ್ಯಾದಿಗಳು ಕಂಡುಬಂದರೆ ಇವು ಮಲೇರಿಯಾದ ಲಕ್ಷಣಗಳಾಗಿದ್ದು, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.