ಯಲ್ಲಾಪುರ: ಟಿಪ್ಪು ಜಯಂತಿ ಅನೇಕ ಕಾರಣದಿಂದಾಗಿ ಪರ ವಿರೋಧಗಳನ್ನು ಕಂಡುಕೊಳ್ಳುತ್ತಲೇ ಇದೆ. ಇಂದು ಆಚರಣೆಯಾಗುತ್ತಿರುವ ಟಿಪ್ಪು ಜಯಂತಿಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸಿ ಯಲ್ಲಾಪುರದಲ್ಲಿ ಕೆಲವರು ಶುಕ್ರವಾರ ಅಂಬೇಡ್ಕರ ವೃತ್ತದ ಬಳಿ ಅರೆ ನಗ್ನರಾಗಿ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿ ಪ್ರತಿಭಟಿಸಿದರು.
ನಂತರ ಅವರನ್ನು ಪೊಲೀಸ್ ನಿರೀಕ್ಷಕ ಡಾ ಮಂಜುನಾಥ ನಾಯಕ ಹಾಗೂ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಕರೆದೊಯ್ದರು.
ಸಾರ್ವಜನಿಕ ಕಾರ್ಯಕ್ರಮ ನಡೆಯುವ ಪೂರ್ವ ಈ ಘಟನೆ ನಡೆದಿದ್ದು, ಗಾಂಧಿ ಕುಟೀರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಪ್ರತಿಭಟನೆಯಿಂದ ಯಾವುದೇ ರೀತಿ ಅಡಚಣೆಯಾಗಿಲ್ಲ.
ಹಿಂದೂ ಸಂಘಟನೆಯ ಪ್ರಮುಖ ಸೋಮೇಶ್ವರ ನಾಯ್ಕ, ಅಮಿತ್ ನಾಯ್ಕ ಮಂಚಿಕೇರಿ, ಬಂಧಿತರಾಗಿದ್ದವರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಇನ್ನೂ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.