ಕಾರವಾರ:ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಊಟ ನೀಡಲು ಅಂಗನವಾಡಿ ಕೇಂದ್ರವನ್ನು ಬಿಟ್ಟು, ಯಾವುದಾದರೂ ಶಾಲೆಗಳ ಹೆಚ್ಚುವರಿ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ವರದಿ ಪರಿಶೀಲಿಸಿ ಮಾತನಾಡಿದ ಅವರು, ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಊಟ ತಯಾರಿಸಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಲ್ಲಿಯೇ ಉಣಬಡಿಸಬೇಕು ಎಂದು ಇದೆ. ಅದನ್ನೇ ಇಲ್ಲಿಯೂ ಪಾಲಿಸಲಾಗುತ್ತಿದೆ. ಆದರೆ, ಯಾವುದೇ ತಾಯಿಯು ಮಕ್ಕಳ ಎದುರು ಅವರನ್ನು ಬಿಟ್ಟು ತಾನೊಬ್ಬಳೆ ಊಟ ಮಾಡುವುದಿಲ್ಲ. ಅಂಗನವಾಡಿ ಮಕ್ಕಳಿಗೆ ಹಾಗೂ ಮಾತೃಪೂರ್ಣ ಫಲಾನುಭವಿಗಳಿಬ್ಬರಿಗೂ ಒಂದೇ ತೆರನಾದ ಪೌಷ್ಠಿಕ ಆಹಾರ ನೀಡಲಾಗುತ್ತದೆಯಾದರೂ, ಉಳಿದ ಮೊಟ್ಟೆ, ಚಿಕ್ಕಿಗಳನ್ನು ಅವರು ಮಕ್ಕಳ ಎದುರು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಇದಕ್ಕಾಗಿ ಅಂಗನವಾಡಿಯನ್ನು ಬಿಟ್ಟು ಇತರೆ ಶಾಲೆಗಳಲ್ಲಿ ಲಭ್ಯ ಇರುವ ಹೆಚ್ಚುವರಿ ಕೊಠಡಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಹಶೀಲ್ದಾರ್ ಜಿ.ಎನ್.ನಾಯ್ಕ ಉಪಸ್ಥಿತರಿದ್ದರು.