ಸಿದ್ದಾಪುರ: ಕಂದಾಯ ಇಲಾಖೆ ಹೊಸ ತಂತ್ರಜ್ಞಾನದೊಂದಿಗೆ ನಡೆಸುತ್ತಿರುವ ಬೆಳೆ ಸಮೀಕ್ಷೆ ತಾಲ್ಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚು ಮುಗಿದಿದ್ದು, ಬೆಳೆಯ ನಿಖರ ಮಾಹಿತಿ ದಾಖಲಾಗುತ್ತಿದೆ. ತಾಲ್ಲೂಕಿನಲ್ಲಿ ಶೇ 70ಕ್ಕಿಂತ ಅಧಿಕ ಸರ್ವೆ ನಂಬರ್‌ಗಳ ಬೆಳೆ ಸಮೀಕ್ಷೆ ಮುಗಿದಿದೆ. ತಾಲ್ಲೂಕಿನಲ್ಲಿ ಒಟ್ಟು 69 ಸಾವಿರ ಸರ್ವೆ ನಂಬರ್‌ಗಳಿದ್ದು, ಇವುಗಳಲ್ಲಿ 7 ಸಾವಿರದಷ್ಟು ಬೆಳೆಗಳಿಲ್ಲದ ಸರ್ವೆ ನಂಬರ್‌ಗಳು. ಉಳಿದ 61,684 ಸರ್ವೆ ನಂಬರ್‌ಗಳ ಪೈಕಿ, 43,991(ನವೆಂಬರ್ 8ರ ಸಂಜೆಯವರೆಗೆ) ಸರ್ವೆ ನಂಬರ್‌ಗಳಲ್ಲಿರುವ ಬೆಳೆಗಳ ಸಮೀಕ್ಷೆಯನ್ನು ಮುಗಿಸಲಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

RELATED ARTICLES  ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕೋವಿಡ್ ಟೆಸ್ಟ್

‘ಮೊದಲು ಕೈಬರಹದ ಮೂಲಕ ಜಮೀನಿನಲ್ಲಿರುವ ಬೆಳೆಗಳನ್ನು ದಾಖಲು ಮಾಡಲಾಗುತ್ತಿತ್ತು. ಈಗ ಜಿಪಿಎಸ್ ಮೂಲಕ ಜಮೀನನ್ನು ಗುರುತಿಸಿ, ಅದರಲ್ಲಿರುವ ಬೆಳೆ ಮಾಹಿತಿಯನ್ನು ತಂತ್ರಾಂಶ (ಆ್ಯಪ್‌)ಕ್ಕೆ ಅಪ್ ಲೋಡ್ ಮಾಡಲಾಗುತ್ತದೆ. ಈ ರೀತಿ ಬೆಳೆ ಸಮೀಕ್ಷೆ ಮಾಡಿರುವುದನ್ನು ಪಹಣಿ ಪತ್ರಿಕೆಗಳಿಗೆ ದಾಖಲು ಮಾಡಲಾಗುತ್ತದೆಯೇ ಎಂಬುದು ತಿಳಿಯದು’ ಎಂದು ತಹಶೀಲ್ದಾರ್ ಪಟ್ಟರಾಜ ಗೌಡ ಮಾಹಿತಿ ನೀಡಿದರು.

‘ಇದು ಅಂಕಿ–ಸಂಖ್ಯೆಗಳ ದಾಖಲೀಕರಣದ ಕೆಲಸ. ಈ ಮಾಹಿತಿಯನ್ನು ಬೆಳೆ ಹಾನಿ, ಬೆಳೆ ವಿಮೆಗೆ ಉಪಯೋಗ ಮಾಡಬಹುದು. ಆದರೆ ನಿಖರವಾಗಿ ಯಾವ ಉದ್ದೇಶಕ್ಕೆ ಈ ದಾಖಲೀಕರಣ ನಡೆಸಲಾಗಿದೆ ಎಂಬುದು ನಮಗೆ ತಿಳಿದಿಲ್ಲ’ ಎಂದು ಉಪ ತಹಶೀಲ್ದಾರ್ ಡಿ.ಆರ್.ಬೆಳ್ಳಿಮನೆ ಅಭಿಪ್ರಾಯ ಪಟ್ಟರು.

RELATED ARTICLES  ಪುಸ್ತಕಗಳೇ ನಿಜವಾದ ಸಂಗಾತಿ : ಝಮೀರುಲ್ಲಾ ಷರೀಫ್

ಕಂದಾಯ ಇಲಾಖೆಯ 33 ಸಿಬ್ಬಂದಿ, ತೋಟಗಾರಿಕಾ ಇಲಾಖೆಯ ಐವರು, ಕೃಷಿ ಇಲಾಖೆಯ ಮೂವರು ಹಾಗೂ ರೇಷ್ಮೆ ಇಲಾಖೆಯ ಇಬ್ಬರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಬೆಳೆ ಸಮೀಕ್ಷೆ ಕಾರ್ಯ ನವೆಂಬರ್ 12ಕ್ಕೆ ಮುಕ್ತಾಯಗೊಳ್ಳಬೇಕಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.