ಬೆಂಗಳೂರು: ಬೆಳಗಾವಿಯಲ್ಲಿ ಇದೇ 13ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ₹ 31 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ವಿಧಾನಸಭಾ ಸಚಿವಾಲಯ ಹಣಕಾಸು ಇಲಾಖೆಗೆ ಸಲ್ಲಿಸಿದೆ.

2016ರ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯ ವೆಚ್ಚ ಮಾಡಿದ ಒಟ್ಟು ಮೊತ್ತಕ್ಕೆ ಹೋಲಿಸಿದರೆ ಈ ಮೊತ್ತ ಇಮ್ಮಡಿಯಷ್ಟಾಗಿದೆ. ಕಳೆದ ವರ್ಷ ಸಚಿವಾಲಯ ₹ 18.75 ಕೋಟಿ ವೆಚ್ಚ ಮಾಡಿತ್ತು.

ಈ ಬಾರಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ದರ ಹೆಚ್ಚಳ ಉಲ್ಲೇಖಿಸಿ, ಹೆಚ್ಚುವರಿಯಾಗಿ ₹ 13 ಕೋಟಿ ವೆಚ್ಚದ ಪ್ರಸ್ತಾವವನ್ನು ಸಚಿವಾಲಯ ಆರ್ಥಿಕ ಇಲಾಖೆಗೆ ಸಲ್ಲಿಸಿದೆ. ಆರ್ಥಿಕ ಇಲಾಖೆ ಈಗಾಗಲೇ ₹ 18. 25 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿದೆ.

ವಿಧಾನಸೌಧದ ವಜ್ರ ಮಹೋತ್ಸವ ಆಚರಣೆಗೆ ಸಚಿವಾಲಯ ಸಲ್ಲಿಸಿದ್ದ ₹ 27 ಕೋಟಿ ಅಂದಾಜು ವೆಚ್ಚದ ಪಟ್ಟಿ ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ₹ 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು.

RELATED ARTICLES  ಶಾ ನಡೆಸಲಿದ್ದಾರೆ ಸರ್ಜಿಕಲ್ ಸ್ಟ್ರೈಕ್? ಅನಂತ್ ಕುಮಾರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ?

‘ಬೆಳಗಾವಿಯಲ್ಲಿ ಈ ವರ್ಷದ ಕೊನೆಯ ಅಧಿವೇಶನ ನಡೆಯುತ್ತಿರುವುದರಿಂದ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಜಿಎಸ್‌ಟಿಯಿಂದಲೂ ಖರ್ಚು ಹೆಚ್ಚುವುದರಿಂದ ಈ ಬಾರಿ ಒಟ್ಟು ವೆಚ್ಚ ಹೆಚ್ಚಲಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ಈಗಾಗಲೇ ₹ 21 ಕೋಟಿ ಮಂಜೂರು ಮಾಡಿದೆ. ಅಧಿವೇಶನ ಸಂದರ್ಭದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲು ಈ ಹಣ ಸಾಕಾಗದು. ಹೀಗಾಗಿ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದೇವೆ. ಅದಕ್ಕೆ ಸಮರ್ಥನೆಯನ್ನೂ ನೀಡಿದ್ದೇವೆ’ ಎಂದರು.

‘ಜಿಎಸ್‌ಟಿ ಅನುಷ್ಠಾನದಿಂದ ದೊಡ್ಡ ಹೊರೆಯಾಗುತ್ತಿದೆ. 5,500 ಪೊಲೀಸ್‌ ಸಿಬ್ಬಂದಿಯ ನಿಯೋಜನೆಗೆ ₹ 4 ಕೋಟಿ ಅಗತ್ಯವಿದೆ ಎಂದು ಪೊಲೀಸ್‌ ಇಲಾಖೆ ಕೂಡಾ ಮನವಿ ಮಾಡಿದೆ. ಕಳೆದ ವರ್ಷ ಪೊಲೀಸ್‌ ಇಲಾಖೆಗೆ ₹ 1.50 ಕೋಟಿ ನೀಡಲಾಗಿತ್ತು’ ಎಂದೂ ಅವರು ವಿವರಿಸಿದರು. ಆದರೆ, ಹೆಚ್ಚುವರಿಯಾಗಿ ಎಷ್ಟು ಹಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲು ಕೋಳಿವಾಡ ನಿರಾಕರಿಸಿದರು.

RELATED ARTICLES  ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ನಿರಂಜನ ವಾನಳ್ಳಿ

‘ವಸತಿ, ಆಹಾರ ಮತ್ತು ಭದ್ರತಾ ವ್ಯವಸ್ಥೆಗಳಿಗಾಗಿ ಹೆಚ್ಚುವರಿಯಾಗಿ ₹ 13 ಕೋಟಿ ಬೇಕಾಗಿದೆ ಎಂದು ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ’ ಆರ್ಥಿಕ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

‘ವಿಧಾನ ಮಂಡಲ ಸಚಿವಾಲಯದಿಂದ ಪ್ರಸ್ತಾವನೆ ಬಂದ ತಕ್ಷಣ ಜಿಎಸ್‌ಟಿ ಇರುವ ವಸ್ತುಗಳಿಗೆ ಶೇ 28ರಷ್ಟು ತೆರಿಗೆ ನಿಗದಿಪಡಿಸಿ ₹ 2.5 ಕೋಟಿ ಹೆಚ್ಚುವರಿ ಹಣ ಬಿಡುಗಡೆಗೆ ಒಪ್ಪಲಾಗಿದೆ. ಮುಖ್ಯಮಂತ್ರಿ ಅದಕ್ಕೆ ಅನುಮೋದನೆ ನೀಡಿದ್ದಾರೆ. ಅಂದಾಜು ವೆಚ್ಚದ ವಿವರವಾದ ಪಟ್ಟಿಯನ್ನು ಸಚಿವಾಲಯ ಇನ್ನೂ ಸಲ್ಲಿಸಿಲ್ಲ’ ಎಂದೂ ಮೂಲಗಳು ಹೇಳಿವೆ.