ಕುಮಟಾ: ಕಳೆದ ಆರು ತಿಂಗಳ ಹಿಂದೆ ಪಟ್ಟಣದ ಚಿತ್ರಿಗಿಯ ಕಲ್ಲುಗಳೇ ತುಂಬಿರುವ ಗುಡ್ಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ ಔಷಧೀಯ ಹಾಗೂ ಕಾಡು ಜಾತಿಯ ಸಸ್ಯಗಳು ಈಗ ಹುಲುಸಾಗಿ ಬೆಳೆಯುತ್ತಾ ನೆರಳು ನೀಡಲಾರಂಭಿಸಿವೆ.

ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿ ₹ 40 ಲಕ್ಷ ವೆಚ್ಚದಲ್ಲಿ ಸುಮಾರು 5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿದ ಸಸ್ಯೋದ್ಯಾನವನದಲ್ಲಿ 70ಕ್ಕೂ ಅಧಿಕ ಜಾತಿಯ ಕಾಡು ಜಾತಿ ಹಾಗೂ ಔಷಧಿ ಸಸ್ಯಗಳಿವೆ. ಕಳೆದ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಸಸ್ಯೋದ್ಯಾನವನದ ಗಿಡಗಳು ಮಳೆಗಾಲದಲ್ಲಿ ಸಾಕಷ್ಟು ಬೆಳೆದಿದ್ದು, ಈಗ ನಿತ್ಯ ನೀರುಣಿಸಲಾಗುತ್ತಿದೆ.

ಬೀಟೆ, ಮತ್ತಿಯಂಥ ಬೆಲೆ ಬಾಳುವ ಜಾತಿಯ ಕಟ್ಟಿಗೆಯ ಸುಂದರ ಪೀಠೋಪಕರಣಗಳನ್ನು ಮನೆಯಲ್ಲಿ ನೋಡಿದವರಿಗೆ ಕಾಡಿನಲ್ಲಿ ಅಂಥ ಮರಗಳು ಹೇಗಿರುತ್ತವೆ. ಅದರ ಎಲೆ ಯಾವ ಆಕಾರದ್ದಿರುತ್ತದೆ ಎನ್ನುವ ಅರಿವು ಹೆಚ್ಚಿನವರಿಗಿರಲಿಲ್ಲ. ಅಂಥ ಎಲ್ಲ ಜಾತಿಯ ಗಿಡಗಳನ್ನು ಈಗ ಉದ್ಯಾನದಲ್ಲಿ ನೋಡಬಹುದಾಗಿದೆ.

RELATED ARTICLES  ಗುಣವಂತೆಯಲ್ಲಿ ಯಕ್ಷಗಾನ ಭಿತ್ತಿಚಿತ್ರ ಕಾರ್ಯಾಗಾರ ನಾಳೆಯಿಂದ

ಅಂತೆಯೇ ಕೇವಲ ಹೆಸರು ಮಾತ್ರ ಕೇಳಿದ್ದ ಆದರೆ ಖುದ್ದಾಗಿ ನೋಡದ ಬಗೆ ಬಗೆಯ ಔಷಧಿ ಸಸ್ಯಗಳೂ ಇಲ್ಲಿ ಈಗ ಕಾಣಸಿಗುತ್ತವೆ. ಉದ್ಯಾನದ ಪ್ರವೇಶ ದ್ವಾರದಲ್ಲಿ ಎಕ್ಕ, ಉತ್ರಾಣಿ, ಅತ್ತಿ, ಅರಳಿ, ಬನ್ನಿ, ದೂರ್ವೆ, ಮುತ್ತುಗ, ದರ್ಬೆ, ಖೈರ ಸೇರಿ ಒಂಬತ್ತು ಜಾತಿಯ ಪುಟ್ಟ ನವಗೃಹ ವನವಿದೆ. ಒಂದೊಂದು ಸಸ್ಯಕ್ಕೂ ಒಂದೊಂದು ಗೃಹದ ಜೊತೆ ಇರುವ ಸಂಬಂಧವನ್ನು ಈ ವನ ಸೂಚಿಸುತ್ತದೆ.

ಸಸ್ಯಗಳನ್ನು ಅಧ್ಯಯನ ಮಾಡಬಯಸುವ ಸಸ್ಯಶಾಸ್ತ್ರ ವಿದ್ಯಾರ್ಥಿಗಳು ತಮಗೆ ಬೇಕಾದ ಜಾತಿಯ ಮರ–ಗಡಿಗಳನ್ನು ಅರಸಿ ಕಾಡು ಅಲೆಯಬೇಕಿತ್ತು. ಆದರೆ ಇನ್ನು ಮುಂದೆ ಎಲ್ಲ ಜಾತಿಯ ಗಿಡಗಳು ಈಗ ಒಂದೇ ಕಡೆ ಅಧ್ಯಯನಕ್ಕೆ ಲಭ್ಯ.

RELATED ARTICLES  ಬಸ್ ನ ಟೈರ್ ಅಡಿಗೆ ಸಿಲುಕಿದ ಸ್ಕೂಟರ್..!

ಸಸ್ಯೋದ್ಯಾನವನಕ್ಕೆ ಸಾರ್ವಜನಿಕರನ್ನು ಸೆಳೆಯುವ ಉ್ದೇಶದಿಂದ ಅರಣ್ಯ ಇಲಾಖೆ ₹ 10 ಕನಿಷ್ಠ ಪ್ರವೇಶ ಶುಲ್ಕ ಆಕರಿಸುತ್ತಿದೆ. ಶನಿವಾರ, ಭಾನುವಾರದ ರಜಾ ದಿನಗಳಂದು ಅರಣ್ಯ ಪ್ರದೇಶದಿಂದ ಕೊಂಚ ದೂರ ಇರುವ ಸಮುದ್ರ ದಡದ ನಿವಾಸಿಗಳು ಹೆಚ್ಚಾಗಿ ಕುಟುಂಬ ಸಮೇತರಾಗಿ ಬಂದು ಗಿಡಗಳನ್ನು ನೋಡಿ ಕೆಲ ತಾಸು ಕಳೆದು ಹೋಗುತ್ತಿದ್ದಾರೆ.

‘ಜನರಿಗೆ ಅರಣ್ಯದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಯಬೇಕು ಎನ್ನುವುದು ಈ ಯೋಜನೆಯ ಉದ್ದೇಶ. ಸಸ್ಯೋದ್ಯಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಇದು ನಮ್ಮದು ಎನ್ನುವ ಭಾವನೆ ಬೆಳೆದರೆ ಇದರ ರಕ್ಷಣೆ ಸುಲಭದ ಕೆಲಸ’ ಎಂದು ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ. ನಾಯ್ಕ ತಿಳಿಸುತ್ತಾರೆ.ಹಾಗಾದರೆ ನೀವು ಒಮ್ಮೆ ಭೇಟಿ ನೀಡುತ್ತೀರಿ ಅಲ್ವಾ?