ಕಾರವಾರ: ನಾಲ್ಕೂವರೆ ವರ್ಷದಿಂದ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮತ್ತೆ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಅಂಕೋಲಾ– ಕಾರವಾರ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.
2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು ಭಾರಿ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆನಂತರ ಅವರು ಕ್ಷೇತ್ರದಿಂದಲೇ ‘ಕಣ್ಮರೆ’ಯಾಗಿ ಉದ್ಯಮದತ್ತ ವಾಲಿದ್ದರು. ಇತ್ತ ಬಿಜೆಪಿಯ ಯಾವುದೇ ವೇದಿಕೆಯಲ್ಲಾಗಲಿ ಅಥವಾ ಸಂಘಟನೆಯಲ್ಲಾಗಲಿ ಅವರು ಕಾಣಿಸಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅವರು ‘ಕಾಂಗ್ರೆಸ್ ಸೇರಲಿದ್ದಾರೆ’ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡಿತ್ತು. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದನ್ನು ಅಲ್ಲಗಳೆದಿದ್ದರು.
ಇನ್ನು ಜಿಲ್ಲೆಯ ಬಿಜೆಪಿ ಮುಖಂಡರು ‘ಆನಂದ ಬಿಜೆಪಿಯಲ್ಲಿ ಇಲ್ಲ’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆಗಲೂ ಸಹ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿದ್ದರು. ಹೀಗಾಗಿ ಅವರ ಪಾಲಿಗೆ ಬಿಜೆಪಿಯ ಬಾಗಿಲು ಬಹುತೇಕ ಬಂದ್ ಆಗಿರುವುದರಿಂದ ಅವರು ಜೆಡಿಎಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಬಲಿಗರಿಂದ ಒತ್ತಡ: ‘ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಆನಂದ ಅವರು ಶಾಸಕ ಹಾಗೂ ಸಚಿವರಾಗಿ ಅನೇಕ ಜನಪರ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಹೀಗಾಗಿ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು. ಕ್ಷೇತ್ರದ ಜನರು ಅವರ ನಾಯಕತ್ವ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ರಾಜಕೀಯ ಮರು ಪ್ರವೇಶ ಮಾಡಬೇಕು ಹಾಗೂ ತಮ್ಮ ನಿಲುವನ್ನು ಬೆಂಬಲಿಗರಿಗೆ ತಿಳಿಸಬೇಕು. ಇದಕ್ಕಾಗಿ ಅವರ ಮನೆ ಮುಂದೆ ಇದೇ 12ರಂದು ಧರಣಿ ನಡೆಸಲಿದ್ದೇವೆ’ ಎಂದು ಅಸ್ನೋಟಿಕರ್ ಅಭಿಮಾನಿ ಬಳಗದ ರಾಘು ನಾಯ್ಕ ತಿಳಿಸಿದ್ದರು.
‘ಅವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ಅವರಿಗೆ ನಮ್ಮ ಬೆಂಬಲ ಇರುತ್ತದೆ. ನಾವೆಲ್ಲ ಸಂಘಟಿತರಾಗಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ’ ಎಂದೂ ಹೇಳಿದರು.
ಸ್ಪಷ್ಪವಾಗಿ ಹೇಳಿಲ್ಲ..: ‘ಆನಂದ ಅವರನ್ನು ಒಂದು ತಿಂಗಳ ಹಿಂದೆ ಭೇಟಿ ಮಾಡಿ, ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದ್ದೇನೆ. ಅವರು ಬೆಂಬಲಿಗರ ಜತೆ ಚರ್ಚಿಸಿ ತಮ್ಮ ನಿಲುವು ತಿಳಿಸುವುದಾಗಿ ಹೇಳಿದ್ದಾರೆ. ಆದರೆ ಈವರೆಗೂ ಸಂಪರ್ಕಿಸಿಲ್ಲ’ ಎನ್ನುತ್ತಾರೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ.
ಆನಂದರ ಮುಂದಿನ ನಡೆ ಯಾವಕಡೆ ಎಂಬುದನ್ನು ಮಾತ್ರ ಕಾಯಲೇ ಬೇಕಾದ ಪರಿಸ್ಥಿತಿ ಎಲ್ಲರದ್ದು.