ಗೋಕರ್ಣ: ಇಲ್ಲಿನ ಜಯ ಕರ್ನಾಟಕ ಸಂಘಟನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಗೋಕರ್ಣದ ಮುಖ್ಯ ಬೀಚಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ಉದ್ಘಾಟನಾ ಸಮರಂಭ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮವನ್ನು ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜಯ ಕರ್ನಾಟಕ ಸಂಘಟನೆಯು ಈ ಭಾಗದಲ್ಲಿನ ಹಲವು ಸಮಸ್ಯೆಗಳ ಕುರಿತು ಧ್ವನಿ ಎತ್ತಿದೆ. ಗೋಕರ್ಣ ಭಾಗದಲ್ಲಿ ನೀರಿನ ಸಮಸ್ಯೆ ಇರುವುದನ್ನು ಹೇಳಿ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ಇತ್ತರು.ಇಂತಹ ಕಾರ್ಯಕ್ರಮಗಳು ಜನತೆಗೆ ಮನರಂಜನೆ ನೀಡುವ ಜೊತೆಗೆ ಸಂಸ್ಕ್ರತಿಯ ಪರಿಚಯ ಮಾಡುತ್ತಿದೆ ಎಂದರು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಗೆ ಮನರಂಜನೆ ಜೊತೆಗೆ ಕನ್ನಡದ ಬಗ್ಗೆ ಒಲವು ಬೆಳೆಸುವತ್ತ ನಿಮ್ಮ ಚಿತ್ತ ಹರಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯು ಮುಂಚೂಣಿಯಲ್ಲಿದ್ದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಸಂಘಟನೆಗಳು ಸರಕಾರದ ಹಲವು ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕನ್ನಡವು ಸುದೀರ್ಘ ಇತಿಹಾಸ ಹೊಂದಿರುವ ಭಾಷೆಯಾಗಿದ್ದು ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ ಗೌರವಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಗೆ ಶುಭ ಹಾರೈಸಿದರು. ಗೋಕರ್ಣದ ಭಾಗದಲ್ಲಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರು ಪ್ರಾಮಾಣಿಕವಾಗಿ ನೀರಿನ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದು ಈ ಭಾಗದ ಇಕ್ಕೆಲಗಳಲ್ಲಿ ಗಂಗಾವಳಿ ಮತ್ತು ಶರಾವತಿ ನದಿ ಹರಿಯುತ್ತಿದ್ದು ಸ್ವಾತಂತ್ರ್ಯ ದೊರೆತು 70 ವರ್ಷಗಳು ಕಳೆದರೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗೋಕರ್ಣದಲ್ಲಿ ಇಂದಿಗೂ ನೀರಿನ ಸಮಸ್ಯೆ ಕಾಡುತ್ತಿರುವುದು ಖೇದಕರ ಸಂಗತಿ. ಅಲ್ಲದೇ ಇಂತಹ ಪ್ರಸಿದ್ಧ ಕ್ಷೇತ್ರದಲ್ಲಿ ಓರ್ವರೇ ಉತ್ತಮ ವೈದ್ಯಾಧಿಕಾರಿ ಇದ್ದು ಅವರಿಗೆ ಸಮರ್ಪಕ ಸಹಾಯಕ ಸಿಬ್ಬಂದಿ ವರ್ಗ ಇಲ್ಲದೇ ಇರುವುದರಿಂದ ಕಡುಬಡವರು ಮತ್ತು ಸ್ಥಳೀಯರು ಪರದಾಡುವಂತಾಗಿದೆ. ಇದು ತಾವು ಆಸ್ಪತ್ರೆಗೆ ಭೇಟಿ ನೀಡಿದಾಗ ಕಣ್ಣಾರೆ ನೋಡಿದ ದೃಶ್ಯವಾಗಿದ್ದು ತಾವುಗಳೂ ಕೂಡಾ ಸಮಯ ಒದಗಿಸಿಕೊಂಡು ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಶಿಥಿಲಗೊಂಡಿರುವ ಆಸ್ಪತ್ರೆಯ ಕಟ್ಟಡವನ್ನು ಸುಧಾರಿಸಬೇಕು ಎಂದು ಸ್ಥಳೀಯರ ಪರವಾಗಿ ವಿನಂತಿಸಿಕೊಂಡರು.
ಇನ್ನೋರ್ವ ಅತಿಥಿ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪರಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡಿಗರು ಕನ್ನಡವನ್ನು ಮರೆಯುತ್ತಿರುವುದು ವಿಷಾದನೀಯ. ಕನ್ನಡ ಭಾಷೆಗೆ ವ್ಯಾವಹಾರಿಕ ಮಾನ್ಯತೆ ದೊರೆಯಬೇಕಾಗಿರುವುದು ಅತ್ಯಗತ್ಯವಾಗಿದೆ. ಈ ಭಾಗದ ಜನರ ನೀರಿನ ಸಮಸ್ಯೆಗೆ ಕೇವಲ ಪರಿಹಾರದ ಭರವಸೆ ನೀಡಿದರೆ ಸಾಲದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಸಕರು ತಾವು ನೀರು ಪೂರೈಸಿರುವುದಾಗಿ ಹೇಳುತ್ತಿದ್ದಾರೆ ಆದರೆ ಈ ಭಾಗದಲ್ಲಿ ಪೈಪ್ ಲೈನಗಳನ್ನು ಅಳವಡಿಸಿರುವುದು ತಾನೇ ಎಂದು ನೇರವಾಗಿ ಶಾಸಕರಿಗೆ ತಿರುಗೇಟು ನೀಡಿದರು.
ರವಿಕುಮಾರ ಶೆಟ್ಟಿಯವರು ಮಾತನಾಡಿ ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಜಯ ಕರ್ನಾಟಕ ಸಂಘಟನೆಯು ಮುಂಚೂಣಿಯಲ್ಲಿದೆ. ಈ ಸಂಘಟನೆಯ ಕಾರ್ಯ ಹೀಗೆಯೇ ನಿರಂತರವಾಗಿರಲಿ ಎಂದು ಶುಭ ಹಾರೈಸುತ್ತಾ ಪ್ರದೀಪ ನಾಯಕ ದೇವರಬಾವಿಯವರ ಮಾತುಗಳನ್ನು ನೇರವಾಗಿ ಖಂಡಿಸುತ್ತಾ ಈ ಕಾಮಗಾರಿಯು ತಮ್ಮ ತಂದೆ ಮೋಹನ ಶೆಟ್ಟಿಯವರ ಕಾಲದಲ್ಲಿ ಮಂಜೂರಾಗಿತ್ತು. ಈ ಯೋಜನೆ ಜಿಲ್ಲಾ ಪಂಚಾಯತದ ಕಾರ್ಯವ್ಯಾಪ್ತಿಗೆ ಬರುತ್ತಿದ್ದು ತಾವೂ ಕೂಡಾ ಜಿಲ್ಲಾ ಪಂಚಾಯತದ ಓರ್ವ ಸದಸ್ಯರಾಗಿದ್ದು ಇದುವರೆಗೂ ಈ ಭಾಗದ ಜನರಿಗೆ ನೀರು ಒದಗಿಸುವುದರಲ್ಲಿ ವಿಫಲರಾಗಿದ್ದೀರಿ ಎಂದು ಖಡಾಖಂಡಿತವಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ|| ಸುದೀಪಕುಮಾರ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ರಾಮಚಂದ್ರಯ್ಯ, ದಿಲೀಪ ಆರ್ಗೇಕರ, ಮಹಾಲಕ್ಷ್ಮಿ ಭಡ್ತಿ, ಡಿ. ಜಗದೀಶ, ರೋಷನ ಹರಿಕಂತ್ರ, ಸತೀಶ ಆರ್ಗೇಕರ, ರಾಜು ತಾಂಡೇಲ, ಪಾಂಡುರಂಗ ಪವಾರ, ನಾಗರಾಜ ಹಿತ್ತಲಮಕ್ಕಿ, ಮಂಜುನಾಥ ಜನ್ನು, ಸಂತೋಷಕುಮಾರ, ಮಹಮ್ಮದ ಹನೀಫ ಸಾಬ, ಮಂಗಲಮೂರ್ತಿ ಸಭಾಹಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತೇಜಸ್ವಿ ಪಿ. ನಾಯ್ಕ ಅವರು ಸ್ವಾಗತಿಸಿದರು. ಶೀಲಾ ಪಿ. ಮೇಸ್ತ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಗಾನಗಂಧರ್ವ ಮೆಲೋಡಿಯಸ್ ಇವರಿಂದ ರಸಮಂಜರಿ ಹಾಗೂ ಹೆಸರಾಂತ ಜಾದುಗಾರ ಶ್ರೀರಾಮ ಜಾದೂಗಾರರಿಂದ ಜಾದೂ ಪ್ರದರ್ಶನ ನಡೆಯಿತು.