ಬೆಳಗಾವಿ: ಸಮಾಜದಲ್ಲಿ ಹೆಚ್ಚುತ್ತಿರುವ ಮೂಢನಂಬಿಕೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ವಿವಾದಿತ ಹಾಗೂ ಬಹು ಚರ್ಚಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡಿಸಿದೆ.

ಡಿವೈಎಸ್ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ರಾಜಿನಾಮೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯ ನಡುವೆಯೇ ವಿಧಾನಸಭೆಯಲ್ಲಿ ಇಂದು ಮೌಢ್ಯ ಪ್ರತಿಬಂಧಕ ವಿಧೇಯಕ, ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ವಿಧೇಯಕ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು.

ವಿಧೇಯಕ ಮಂಡನೆಯಾದ ನಂತರವೂ ಜಾರ್ಜ್​ರಾಜಿನಾಮೆಗೆ ಬಿಜೆಪಿ ಪಟ್ಟು ಹಿಡಿದಿದ್ದರಿಂದ ಸ್ಪೀಕರ್ ಕೆ ಬಿ ಕೋಳಿವಾಡ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಈ ವಿಧೇಯಕಗಳ ಮೇಲೆ ಚರ್ಚೆ ನಡೆಯಲಿದೆ. ಎರಡೂ ಸದನಗಳಲ್ಲಿ ಅಂಗೀಕಾರ ದೊರೆತ ನಂತರ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿದೆ.
ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾದರೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಣೆಯಲ್ಲಿರುವ ಮಡೆ ಸ್ನಾನ, ಉತ್ತರ ಮಧ್ಯ ಕರ್ನಾಟಕ ಭಾಗಗಳಲ್ಲಿ ನಡೆಯುವ ಸಿಡಿ ಸೇವೆ, ಬೆತ್ತಲೆ ಸೇವೆಗಳು ನಿಷೇಧಕ್ಕೆ ಒಳಗಾಗುತ್ತವೆ. ಆದರೆ ಜ್ಯೋತಿಷ್ಯ, ವಾಸ್ತುವಿಗೆ ಈ ಕಾಯ್ದೆಯಿಂದ ಯಾವ ಅಡ್ಡಿಯುಂಟಾಗುವುದಿಲ್ಲ.

RELATED ARTICLES  ಇಂಡೋನೇಷ್ಯಾದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದ ನಮೋ!

ಮೌಡ್ಯಪ್ರತಿಬಂಧಕ ಕಾಯ್ದೆ ಜಾರಿಯಾದ್ರೆ ಇವುಗಳ ಮೇಲೆ ನಿಷೇಧ
ವಾಮಾಚಾರ ನಿಷೇಧ; ವಾಮಚಾರ ಮಾಡಿದ್ರೆ ಕೊಲೆ ಕೇಸ್ ಹಾಕಲಾಗುತ್ತದೆ. ಯಾವುದೇ ವ್ಯಕ್ತಿ ತಾನಾಗಾಲೀ, ಬೇರೆಯವರ ಮೂಲಕವಾಗಲಿ ವಾಮಚಾರ ಮಾಡುವ ಹಾಗಿಲ್ಲ; 302, 307, 306 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು
ಎಂಜಲು ಎಲೆ ಮೇಲೆ ಉರುಳುಸೇವೆ ಮಾಡುವಂತಿಲ್ಲ
ದೇವರ ಹೆಸರಿನಲ್ಲಿ ಕೆಂಡ ಹಾಯುವುಕ್ಕೆ ನಿಷೇಧ
ದೇವರ ಹೆಸರಿನಲ್ಲಿ ದೇಹದೊಳಗೆ ಸಿಡಿ ತೂರಿಸುವುದು, ಬಾಯಿಗೆ ಬೀಗ ಹಾಕುವುದಕ್ಕೆ ನಿಷೇಧ
ಬೆತ್ತಲೆ ಸೇವೆ, ಋತುಮತಿಯಾದ ಮೇಲೆ ಮನೆ ಹೊರಗಿಡುವುದು ನಿಷೇಧ
ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆಗೆ ಮಾಡುವುದು ನಿಷೇಧ
ಭಾನಾಮತಿ, ಮಾಟ ಮಂತ್ರ, ಗುಪ್ತ ನಿಧಿ ನಿಕ್ಷೇಪ, ಬೆತ್ತಲೆ ಮೆರವಣಿಗೆ, ವ್ಯಕ್ತಿ ಮೇಲೆ ಹಲ್ಲೆ ನಡೆಸುವುದು ನಿಷೇಧ
ನಾಯಿ, ಚೇಳು ಕಚ್ಚಿದಾಗ ಚಿಕಿತ್ಸೆ ನೆಪದಲ್ಲಿ ದಾರಾ, ತಾಯ್ತಾ ಕಟ್ಟುವುದು ನಿಷೇಧ

RELATED ARTICLES  ಅಕ್ರಮ ಗೋ ಸಾಗಾಟ : ಹೊಳೆಗದ್ದೆ ಚೆಕ್ ಪೋಸ್ಟ್ ಬಳಿ ಹೆಡೆಮುರಿ ಕಟ್ಟಿದ ಪೊಲೀಸರು

ಇವುಗಳ ಮೇಲೆ ನಿಷೇಧವಿಲ್ಲ
ವಾಸ್ತುಶಾಸ್ತ್ರ, ಜ್ಯೋತಿಷ್ಯ ಸಲಹೆಗಳಿಗೆ ನಿಷೇಧ ಇಲ್ಲ
ಮಕ್ಕಳಿಗೆ ಕಿವಿ‌ಮೂಗು ಚುಚ್ಚುವುದಕ್ಕೆ ನಿಷೇಧವಿಲ್ಲ
ಜೈನ ಸಂಪ್ರದಾಯದ ಕೇಶಲೋಚನದಂಥ ಆಚರಣೆ ನಿಷೇಧ ಇಲ್ಲ
ಹರಿಕಥೆ, ಭಜನೆ, ಪ್ರವಚನ, ಕೀರ್ತನೆಗಳಿಗೆ ನಿಷೇಧ ಇಲ್ಲ
ಪ್ರದಕ್ಷಿಣೆ, ಯಾತ್ರೆಗಳಿಗೆ ನಿಷೇಧ ಇಲ್ಲ
ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಸಾರ ಮಾಡುವುದು ನಿಷೇಧ ಇಲ್ಲ
ಮನೆ, ದೇವಾಲಯ, ದರ್ಗಾ, ಗುರುದ್ವಾರ, ಚರ್ಚ್ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ, ಉಪಾಸನೆ ಆಚರಣೆಗೆ ನಿಷೇಧವಿಲ್ಲ