ಹಿತವಾದ ಚಳಿಯ ಮುಂಜಾನೆ, ಸೋನೆ ಮಳೆಯ ಮುಸ್ಸಂಜೆಯಲ್ಲಿ ಅಂಬೊಡೆ ತಿನ್ನಲು ಸಿಕ್ಕರೆ ಆಗಿನದು ಸ್ವರ್ಗ ಸಮಾನ ಖುಷಿ. ಅಂತೆಯೇ ದಿಢೀರನೆ ನೆಂಟರು ಬಂದಾಗ ಅರ್ಧ ಗಂಟೆಯಲ್ಲೇ ತಯಾರಿಸಬಹುದಾದ ಕೊಬ್ಬರಿ ಮಿಠಾಯಿ ಹಾಗೂ ಸಜ್ಜಪ್ಪ ಹಸಿವು ಕಳೆಯುವ, ಬಾಯಲ್ಲಿ ನೀರೂರಿಸುವ ತಿನಿಸುಗಳೂ ಹೌದು. ಈ ರುಚಿ ರುಚಿ ತಿನಿಸುಗಳನ್ನು ತಯಾರಿಸುವುದು ಹೇಗೆಂದು ನೀವೂ ತಿಳಿದುಕೊಳ್ಳಿ…

1. ಎರಿಯಪ್ಪ
ಬೇಕಾಗುವ ಸಾಮಗ್ರಿ:
ಅಕ್ಕಿ-1 ಕಪ್‌, ತೆಂಗಿನ ತುರಿ-1 ಕಪ್‌, ಬೆಲ್ಲ-2 ಕಪ್‌, ಕರಿಯಲು ಎಣ್ಣೆ, ಏಲಕ್ಕಿ ಪುಡಿ- ಚಿಟಿಕೆಯಷ್ಟು.

ಮಾಡುವ ವಿಧಾನ: ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಬಸಿದುಕೊಳ್ಳಿ. ಈಗ ತೆಂಗಿನ ತುರಿ, ಬೆಲ್ಲದ ಪುಡಿ, ಏಲಕ್ಕಿ ಪುಡಿಯೊಡನೆ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು, ಒಂದು ಸೌಟು ಹಿಟ್ಟನ್ನು ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿಯಿರಿ.

2. ಅಂಬೊಡೆ
ಬೇಕಾಗುವ ಸಾಮಗ್ರಿ:
ಕಡಲೇಬೇಳೆ- 2 ಕಪ್‌, ಹಸಿಮೆಣಸಿನಕಾಯಿ- 3, ಕೊತ್ತಂಬರಿಸೊಪ್ಪು- ಅರ್ಧ ಕಂತೆ, ಕರಿಬೇವು, ಕಾಯಿತುರಿ- ಅರ್ಧ ಕಪ್‌, ಉಪ್ಪು ರುಚಿಗೆ. ಕರಿಯಲು ಎಣ್ಣೆ .

RELATED ARTICLES  ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಹೀಗೆ ಮಾಡಿ.

ಮಾಡುವ ವಿಧಾನ:
ಕಡಲೇಬೇಳೆಯನ್ನು 2 ಗಂಟೆಗಳ ಕಾಲ ನೆನೆಸಿ, ನೀರು ಬಸಿದುಕೊಂಡು, ಹಸಿಮೆಣಸಿನಕಾಯಿ, ಕಾಯಿತುರಿಯೊಡನೆ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಹೆಚ್ಚಿದ ಕರಿಬೇವು ಹಾಕಿ, ಉಪ್ಪು ಹಾಕಿ ನೀರು ಸೇರಿಸದೆ ಕಲಸಿ. ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಅಂಗೈಗೆ ಎಣ್ಣೆ ಹಚ್ಚಿಕೊಂಡು ಚಿಕ್ಕ ಸೈಜಿಗೆ ತಟ್ಟಿಕೊಳ್ಳಿ. ಅದನ್ನು ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ.

3. ಕೊಬ್ಬರಿ ಮಿಠಾಯಿ
ಬೇಕಾಗುವ ಸಾಮಗ್ರಿ:
ಕಾಯಿತುರಿ- 1 ಕಪ್‌, ಸಕ್ಕರೆ- ಒಂದೂವರೆ ಕಪ್‌, ತುಪ್ಪ- 2 ಚಮಚ, ಏಲಕ್ಕಿ ಪುಡಿ- 2 ಚಮಚ.

ಮಾಡುವ ವಿಧಾನ:
ಕಾಯಿತುರಿಯನ್ನು ನೀರು ಹಾಕದೆ ಹಾಗೇ ರುಬ್ಬಿಕೊಳ್ಳಿ, ದಪ್ಪ ತಳದ ಪಾತ್ರೆಯಲ್ಲಿ ಸಕ್ಕರೆಗೆ ಒಂದು ಕಪ್‌ ನೀರು ಹಾಕಿ ಪಾಕ ಮಾಡಲು ಇಡಿ. ಒಂದೆಳೆ ಪಾಕ ಮಾಡಿಕೊಳ್ಳಿ. ಅದಕ್ಕೆ ರುಬ್ಬಿದ ಕಾಯಿತುರಿಯನ್ನು ಹಾಕಿ ಗಂಟಾಗದಂತೆ ತೆಳ್ಳಗಿನ ಉರಿಯಲ್ಲಿ ಕೈಯಾಡಿಸುತ್ತಿರಿ. ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಕೆದಕಿ, ಮಿಶ್ರಣವು ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮವಾಗಿ ಹರಡಿ, ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರ ಮಿಠಾಯಿ ತಯಾರು.

RELATED ARTICLES  ಒಣಕೆಮ್ಮು ಕಡಿಮೆ ಮಾಡುವ ಸುಲಭ ಮನೆಮದ್ದು

4. ಸಜ್ಜಪ್ಪ
ಬೇಕಾಗುವ ಸಾಮಗ್ರಿ:
ಕಣಕ ತಯಾರಿಸಲು: ಚಿರೋಟಿ ರವೆ- 2 ಕಪ್‌, ಮೈದಾ ಹಿಟ್ಟು- 1 ಕಪ್‌, ಚಿಟಿಕೆ ಉಪ್ಪು, ಎಣ್ಣೆ- 1 ಸೌಟು.
ಹೂರಣಕ್ಕೆ: ತೆಂಗಿನ ತುರಿ-3 ಕಪ್‌, ಕುಟ್ಟಿದ ಬೆಲ್ಲ – ಎರಡೂವರೆ ಕಪ್‌, ಚಿರೋಟಿ ರವೆ- ಕಾಲು ಕಪ್‌, ಏಲಕ್ಕಿ ಪುಡಿ- 2 ಚಮಚ, ಹುರಿದ ಗಸಗಸೆ-1 ಚಮಚ. ಕರಿಯಲು ಎಣ್ಣೆ.

ಮಾಡುವ ವಿಧಾನ:
ದಪ್ಪತಳದ ಪಾತ್ರೆಗೆ ಬೆಲ್ಲ ಹಾಕಿ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿದ ನಂತರ ಕಾಯಿ ತುರಿ, ಚಿರೋಟಿ ರವೆ, ಏಲಕ್ಕಿ ಪುಡಿ, ಹುರಿದ ಗಸಗಸೆ ಹಾಕಿ ಚೆನ್ನಾಗಿ ಕಲಕುತ್ತಿರಿ. ಮಿಶ್ರಣ ಗಟ್ಟಿಯಾಗಿ ತಳ ಬಿಡುವಾಗ ಹೂರಣ ಹದಕ್ಕೆ ಬಂದಿರುತ್ತದೆ.
ಚಿರೋಟಿ ರವೆ, ಮೈದಾ ಸೇರಿಸಿ ಉಪ್ಪು ಹಾಕಿ, ಎಣ್ಣೆ ಹಾಕಿ ಅಗತ್ಯವಿರುವಷ್ಟು ನೀರು ಹಾಕಿ ಕಲಸಿ (ಚಪಾತಿ ಹಿಟ್ಟಿಗಿಂತಲೂ ಮೆದುವಾಗಿರಬೇಕು) ಈ ಹಿಟ್ಟನ್ನು ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಂದೊಂದೇ ಉಂಡೆಯನ್ನು ಪೂರಿಯ ಹಾಳೆಗಳಂತೆ ಒತ್ತಿಕೊಂಡು, ಹೂರಣದ ಉಂಡೆಯನ್ನು ಇಟ್ಟು, ಲಟ್ಟಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.