ಹೊಸಪೇಟೆ: ‘ಇಲ್ಲಿನ ಗೃಹರಕ್ಷಕ ದಳದ ಘಟಕಾಧಿಕಾರಿಯನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಯುವ ಬ್ರಿಗೇಡ್‌ ವಿರುದ್ಧ ದ್ವೇಷ ಸಾಧಿಸಿದೆ. ನಮ್ಮ ಸಂಘಟನೆಯು ‘ನನ್ನ ಕನಸಿನ ಕರ್ನಾಟಕ’ ಶೀರ್ಷಿಕೆಯ ಅಡಿಯಲ್ಲಿ ಸಮಾಜದಲ್ಲಿ ಜಲ ಸಂರಕ್ಷಣೆ ಕುರಿತು ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ.

ಈಗಾಗಲೇ ರಾಜ್ಯದ 350 ಠಾಣೆಗಳಿಗೆ ಭೇಟಿ ಕೊಟ್ಟು ಮಾಹಿತಿ ನೀಡಿದೆ. ಯಾವ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಘಟಕಾಧಿಕಾರಿ ವಿರುದ್ಧ ಕ್ರಮ ಕೈಗೊಂಡಿದ್ದೇಕೇ?’ ಎಂದು ಯುವ ಬ್ರಿಗೇಡ್‌ ರಾಜ್ಯ ಸಹ ಸಂಚಾಲಕ ಸಂತೋಷ್‌ ಸಾಮ್ರಾಟ್‌ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಸಿರುಗುಪ್ಪ, ತೆಕ್ಕಲಕೋಟೆ ಠಾಣೆಗಳಿಗೆ ಹೋಗಿ ‘ನಮ್ಮೊಳಗಿನ ಸೈನಿಕರು’ ಎಂಬ ಸ್ಮರಣಿಕೆಯನ್ನು ಪೊಲೀಸರಿಗೆ ನೀಡಿದ್ದೇವೆ. ಕನಸಿಕ ಕರ್ನಾಟಕದ ಕುರಿತು ವಿವರಿಸಿದ್ದೇವೆ. ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅವರಿಂದ ಹಿಡಿದು ಕೆಳಹಂತದ ಸಿಬ್ಬಂದಿ ವರೆಗೆ ತಿಳಿವಳಿಕೆ ಮೂಡಿಸುವ ಕೆಲಸದ ಜತೆಗೆ ಸ್ಮರಣಿಕೆ ನೀಡಿ ಗೌರವಿಸಿದ್ದೇವೆ. ಹೀಗಿರುವಾಗ ಸರ್ಕಾರ ಗೃಹರಕ್ಷಕ ದಳದ ಘಟಕಾಧಿಕಾರಿಯನ್ನು ಅಮಾನತುಗೊಳಿಸಿ ಏನು ಸಾಧಿಸಲು ಹೊರಟಿದೆ’ ಎಂದು ಕೇಳಿದರು.

RELATED ARTICLES  ಮತ್ತೆ ಏರಿಕೆ ಕಾಣುತ್ತಿರುವ ಕರೋನಾ : ರಾಜ್ಯಕ್ಕೆ ಕೇಂದ್ರದ ಎಚ್ಚರಿಕೆ.

‘ನ. 12ರಂದು ಹೊಸಪೇಟೆಯ ಗೃಹರಕ್ಷಕ ದಳದ ಕಚೇರಿಯಲ್ಲಿ ಐದರಿಂದ ಏಳು ನಿಮಿಷ ಜಲಸಂರಕ್ಷಣೆ ಕುರಿತು ಜಾಗೃತಿ ಮಾಡಿದ್ದೇವೆ. ಮೈಸೂರಿನ ರಾಮಕೃಷ್ಣ ಆಶ್ರಮವು ಸ್ವಾಮಿ ವಿವೇಕಾನಂದರ ಕುರಿತು ಪ್ರಕಟಿಸಿರುವ ‘ಭವ್ಯ ವ್ಯಕ್ತಿತ್ವ ದಿವ್ಯ ಸಂದೇಶ’ ಎಂಬ ಪುಸ್ತಕ ನೀಡಿದ್ದೇವೆ. ಇದರಲ್ಲಿ ಏನಾದರೂ ತಪ್ಪಿದೆಯಾ? ಹಲವು ಸರ್ಕಾರಿ ಇಲಾಖೆಗಳ ನೌಕರರು ಯಾವುದೇ ಫಲಾಪೇಕ್ಷೆ ಇಲ್ಲದೇ ನಮ್ಮ ಅಭಿಯಾನದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ಗೃಹರಕ್ಷಕ ದಳದ ಘಟಕಾಧಿಕಾರಿಗೆ ಅಮಾನತುಗೊಳಿಸುವ ಮುನ್ನ ಸರ್ಕಾರ ಕಾರಣ ಕೇಳಿ ನೋಟಿಸ್‌ ನೀಡಬಹುದಿತ್ತು. ಆದರೆ, ಸರ್ಕಾರ ಹಾಗೆ ಮಾಡಲಿಲ್ಲ. ಅಷ್ಟೇ ಅಲ್ಲ, ಅಮಾನತು ಆದೇಶದ ಪ್ರತಿ ಅಧಿಕಾರಿಯ ಕೈಸೇರುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನೆಲ್ಲ ನೋಡಿದರೆ ಏನೋ ಸಂದೇಹ ಬರುತ್ತಿದೆ. ಯಾವುದೇ ತಪ್ಪು ಮಾಡದ ಅಧಿಕಾರಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದನ್ನು ವಿರೋಧಿಸಿ ‘ಬಡವರ ಹೊಟ್ಟೆಗೆ ಬೆಂಕಿ’ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

‘ಚುನಾವಣೆ ಹತ್ತಿರ ಬರುತ್ತಿರುವುದರಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಸಂಘಟನೆಯಿಂದ ಮಾಡುತ್ತಿದ್ದೇವೆ. ಅದರ ಜತೆಗೆ ಕನಸಿನ ಕರ್ನಾಟಕ ಹೇಗಿರಬೇಕು, ಜಲ ಸಂರಕ್ಷಣೆ ಹಾಗೂ ರಾಷ್ಟ್ರೀಯತೆ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ. ರಾಷ್ಟ್ರೀಯತೆ ಪರ ಯಾರೇ ಕೆಲಸ ಮಾಡಲಿ ಅಂತಹವರನ್ನು ಬೆಂಬಲಿಸುತ್ತೇವೆ ಹೊರತು ಯಾವುದೇ ಪಕ್ಷ, ಜಾತಿಯನ್ನು ಅಲ್ಲ. ನಮ್ಮ ಸಂಘಟನೆಯ ಕೂಗಿನಿಂದ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿ.ಎಸ್‌.ಟಿ.) ಕೇಂದ್ರ ಸರ್ಕಾರ ಕೆಲವೊಂದು ಸುಧಾರಣೆಗಳನ್ನು ತಂದಿದೆ. ಸಮಸ್ಯೆಗಳಿಗೆ ಆಯಾ ಊರುಗಳಲ್ಲೇ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕುತ್ತೇವೆ’ ಎಂದರು.

‘ಯಾರೂ ಬೇಕಾದರೂ ನಮ್ಮ ಅಭಿಯಾನದ ಭಾಗವಾಗಬಹುದು. ನಮ್ಮ ಕನಸಿನ ಕರ್ನಾಟಕ ಯೋಜನೆ ನೋಡಿಕೊಂಡು ರಾಜ್ಯ ಸರ್ಕಾರ ನವ ಕರ್ನಾಟಕ ಯೋಜನೆ ಜಾರಿಗೊಳಿಸಲು ಮುಂದಾಗಿದೆ’ ಎಂದರು. ಯುವ ಬ್ರಿಗೇಡ್‌ನ ಬಳ್ಳಾರಿ ಜಿಲ್ಲಾ ಸಂಚಾಲಕ ಶ್ರೀಕೃಷ್ಣ, ಹೊಸಪೇಟೆ ತಾಲ್ಲೂಕು ಸಂಚಾಲಕ ಚಂದ್ರಶೇಖರ್‌, ಮುಖಂಡ ಸಮೀರ್‌ ಕುಲಕರ್ಣಿ ಇದ್ದರು.