ಕಾರವಾರ: ಆಶ್ರಯವಿಲ್ಲದೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಅಂಧ ದಂಪತಿಗೆ ಆಶ್ರಯ ನೀಡಿವಂತೆ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಮುಂಡಗೋಡ ಗ್ರಾಮದ ಅಂಧ ಫಕೀರಪ್ಪ ಹಾಗೂ ಪಾರ್ವತಿ ದಂಪತಿಯು ಮನೆಯಿಲ್ಲದೆ, ಕೆಲಸ ಕಾರ್ಯವಿಲ್ಲದೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ವಿಧಿಯಿಲ್ಲದೆ ಮಕ್ಕಳನ್ನು ಕೂಡ ಭಿಕ್ಷೆ ಬೇಡಲು ಒಯ್ಯುತ್ತಿದ್ದಾರೆ. ಹೀಗೆ ಭಿಕ್ಷೆ ಬೇಡಿದ ಹಣದಿಂದ ಕುಟುಂಬ ಜೀವನ ಸಾಗಿಸುತ್ತಿದೆ. ಸೂರಿಲ್ಲದೆ ರಸ್ತೆ ಬದಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಆಶ್ರಯ ನೀಡಬೇಕು. ದಂಪತಿಯ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿ ನಿಲಯದಲ್ಲಿ ಇರಲು ಅವಕಾಶ ಕಲ್ಪಿಸಬೇಕೆಂದು ಹಾಗೂ ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಂದು ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ದಂಪತಿಗಳಿಬ್ಬರೂ ಅಂಧರಿರುವುದರಿಂದ ಹಾಗೂ ಸ್ವಂತ ಜಾಗವನ್ನು ಹೊಂದಿಲ್ಲದ್ದರಿಂದ ದೇವರಾಜ ಅರಸು ವಸತಿ ಯೋಜನೆಯಲ್ಲಿ ಮನೆಗಳನ್ನು ನೀಡಬಹುದಾಗಿದೆ. ಜಾಗದ ಕಾಗದ ಪತ್ರಗಳು ಹಾಗೂ ಅಗತ್ಯ ದಾಖಲೆಗಳನ್ನು ಶಿಶು ಅಭಿವೃದ್ಧಿ ಯೋಜನೆಯ ಉಪನಿರ್ದೇಶಕರಿಗೆ ಭೇಟಿ ಮಾಡಿ ಸಲ್ಲಿಸಿ. ಬಳಿಕ ವಸತಿ ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.