ಕಾರವಾರ: ಕೆಪಿಎಂಇ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿದ ಕಾರಣ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಉತ್ತರ ಕನ್ನಡದಲ್ಲಿ 534 ಖಾಸಗಿ ಆಸ್ಪತ್ರೆಗಳು ಇಂದು ತಮ್ಮ ಕಾರ್ಯ ಸ್ಥಗಿತಗೊಳಿಸಿದ್ದು, ಖಾಸಗಿ ಆಸ್ಪತ್ರೆಗಳ ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಪಿಎಂಇ ಮಸೂದೆಯನ್ನು ಮಂಡನೆ ಮಾಡಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಹೊಡೆತ ಬೀಳಲಿದೆ. ಆರೋಗ್ಯ ಸೇವೆಗೆ ದರ ನಿಗದಿ ಸರಿಯಲ್ಲ. ಖಾಸಗಿ ವೈದ್ಯರ ಮೇಲೆ ಸರ್ಕಾರ ಕತ್ತಿ ಬೀಸುವ ಮೂಲಕ ರೋಗಿಗಳನ್ನು ಬಲಿಪಶು ಮಾಡಲು ಹೊರಟಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಜನ ಸಮೂಹ:
ಖಾಸಗಿ ಆಸ್ಪತ್ರೆಗಳು ಬಂದ್ ಇರುವುದರಿಂದ ಜನ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅದೀಗ ಬಂದ್ ಇರುವ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯ ಎಲ್ಲ ವಿಭಾಗದಲ್ಲಿಯೂ ಜನವೋ ಜನ ಎಂಬಂತಾಗಿದೆ.