ಕಾರವಾರ : ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನೀಡುವ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿರುವಂತೆ ಸಚಿವ ಆರ್.ವಿ.ದೇಶಪಾಂಡೆಯೊಂದಿಗೆ ಫೋಟೋ ತೆಗೆದುಕೊಂಡು ನಂತರ ವಿತರಣೆ ಮಾಡಿಲ್ಲವೆಂದು ಫಲಾನುಭವಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಜಿಲ್ಲೆಯ ಮುಡಗೇರಿ ಹೊಸಾಳಿಯ ನಿವಾಸಿ ನಯಾಜ್ ಸಯ್ಯದ್ ಹುಟ್ಟು ಅಂಗವಿಕಲನಾಗಿದ್ದು, ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ. ಹಲವು ವರ್ಷಗಳ ಬೇಡಿಕೆಯಿಂದಾಗಿ ನ.01ರಂದು ಕನ್ನಡ ರಾಜ್ಯೋತ್ವವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಾಹನ ವಿತರಣೆ ಮಾಡಿದ್ದರು. ಆದರೆ ಕಾರ್ಯಕ್ರಮದಂದು ವಾಹನದ ಮೇಲೆ ಕುಳ್ಳಿರಿಸಿ ಪೋಟೊ ತೆಗೆದದ್ದು ಬಿಟ್ಟರೆ ಅಂದು ವಾಹನವನ್ನು ನಯಾಜ್‌ಗೆ ಹಸ್ತಾಂತರಿಸಿರಲಿಲ್ಲ. ಎರಡು ದಿನದ ನಂತರ ವಾಹನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಅಧಿಕಾರಿಗಳ ಆಶ್ವಾಸನೆಯನ್ನು ನಂಬಿ ಕಾಲದೂಡಿದ ಫಲಾನುಭವಿಗಳು ನಂತರ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ನಂತರದಲ್ಲಿ ಸಾಮಾಜಿಕ ಕಾರ್ಯಕರ್ತ ರಾಘುನಾಯ್ಕರನ್ನು ಸಂಪರ್ಕಿಸಿದ ನಯಾಜ್ ಕುಟುಂಬ ಜಿಲ್ಲಾಧಿಕಾರಿಗಳಿಗೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಫೋಟೋ ತೆಗೆಸಿ ವಾಹನ ನೀಡದಿರುವುದು ಇಲಾಖೆಯ ತಪ್ಪು. ದೂರಿಗೆ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ ಕೂಡಲೇ ತ್ರಿಚಕ್ರ ವಾಹನವನ್ನು ಫಲಾನುಭವಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.